ಜೋಯಿಡಾ: ತಾಲೂಕಿನ ವೈಜಗಾಂವ ಗ್ರಾಮದ ಡುಮಕರವಾಡಿ ಹೋಗುವ ರಸ್ತೆಯ ಪಕ್ಕದ ಅರಣ್ಯದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿಟ್ಟಿದ್ದರು. ಇದನ್ನು ಕಾರವಾರ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ನಿರ್ದೇಶನದಂತೆ ಗುರುವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಕಾರವಾರ, ಗ್ರಾಮ ಪಂಚಾಯಿತಿ ಶಿಂಗರಗಾಂವ, ಅರಣ್ಯ ಇಲಾಖೆ ಜಗಲಪೇಟ ಮತ್ತು ಜಿಲ್ಲಾ ಪಂಚಾಯಿತಿ ಇಂಜನಿಯರ್ ಇಲಾಖೆಯ ಅಧಿಕಾರಿಗಳ ತಂಡ ಜಪ್ತಿ ಮಾಡಿದ್ದಾರೆ.
ಅಂದಾಜು ಮೌಲ್ಯ 57 ಸಾವಿರದ ಸುಮಾರು 8 ಟಿಪ್ಪರ್ ಆಗುವಷ್ಟು (86 ಟನ್) ಮರಳನ್ನು ಜಪ್ತಮಾಡಲಾಗಿದೆ. ವಶಪಡಿಸಿಕೊಂಡ ಮರಳನ್ನು ತಾಲೂಕಿನ ಜಿಲ್ಲಾ ಪಂಚಾಯಿತಿ ಇಂಜನಿಯರ್ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ಈ ಅಕ್ರಮ ಮರಳು ಜಪ್ತಿ ಮಾಡುವ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರದ ಜಯರಾಮ ನಾಯ್ಕ, ಜಿಲ್ಲಾ ಪಂಚಾಯತ ಇಂಜನಿಯರಿಂಗ್ ಇಲಾಖೆ ಇಂಜಿನಿಯರ್ ಪ್ರವೀಣ, ರಾಮನಗರ ಪಿಎಸೈ ಲಕ್ಷಣ ಪೂಜಾರ, ಡಿಆರ್‌ಎಪ್‌ಓ ದೀಪಕ ಬಂದಗಿ, ಶಿಂಗರಗಾಂವ ಗ್ರಾ.ಪಂ ಪಿಡಿಓ ವೆಂಕಟೇಶ ಕಾಂಬಳೆ, ಕಂದಾಯ ಇಲಾಖೆಯ ಮಂಜುನಾಥ ಲಮಾಣಿ ಇದ್ದರು.