ಬೆಂಗಳೂರು ನವೆಂಬರ್ 20 : ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಾಜಿನಗರದ ಎಲೆಕ್ಟ್ರಿಕ್ ವೆಹಿಕಲ್ ಶೋರೂಂ ನಲ್ಲಿ ಮಂಗಳವಾರ ಸಂಜೆ ನಡೆದ ಅಗ್ನಿ ಅವಘಡ ಎಲ್ಲರನ್ನ ಬೆಚ್ಚಿಬೀಳಿಸಿದೆ. ನೋಡ ನೋಡ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಶೋರೂಂ ವ್ಯಾಪಿಸಿತ್ತು. ಅರ್ಧಗಂಟೆಯಲ್ಲಿ ಇಡೀ ಶೋ ರೂಂ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದೇ ಶೋರೂಂನಲ್ಲಿ ಕಳೆದ 3 ವರ್ಷಗಳಿಂದ ಕೆಲಸ ಮಾಡ್ತಿದ್ದ 20 ವರ್ಷದ ಪ್ರಿಯಾ ಮೃತಪಟ್ಟಿದ್ದಳು. ನಿನ್ನೆ ದುರಂತ ನಡೆದಿದೆ ಇವತ್ತು ಪ್ರಿಯಾ ಹುಟ್ಟಿದ ಹಬ್ಬ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಹುಟ್ಟುಹಬ್ಬದ ಮುನ್ನ ದಿನವೇ ಪ್ರಿಯಾ ಸಾವನಪ್ಪಿದ್ದಾಳೆ. ಬರ್ತ್ ಡೇ ಸಂಭ್ರಮದಲ್ಲಿ ಖುಷಿ ಪಡಬೇಕಿದ್ದ ಜೀವ ಶಾಶ್ವತವಾಗಿ ಕಣ್ಮುಚ್ಚಿದೆ. ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದ ಪ್ರಿಯಾ, ಎಂದಿನಂತೆ ಕೆಲಸಕ್ಕೆ ತೆರಳಿದ್ದಳು. ಭವಿಷ್ಯದ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡಿದ್ದಳು. ಆದ್ರೆ ವಿಧಿ ಅಟ್ಟಹಾಸ ಮೆರೆದಿದ್ದು, ಜನ್ಮದಿನಕ್ಕೂ ಮುನ್ನವೇ ಪ್ರಿಯಾ ಪ್ರಾಣಬಿಟ್ಟಿದ್ದಾಳೆ..
ತನ್ನ ಮಗಳು ಬೆಂಕಿಗಾಹುತಿಯಾದ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾ ತಂದೆ ಆರ್ಮುಗಂ, ನ. 20ರಂದು ನನ್ನ ಮಗಳ ಹುಟ್ಟುಹಬ್ಬವಿತ್ತು. ಅವಳಿಗೆ ಬಟ್ಟೆ ತರಿಸಿಟ್ಟಿದ್ದೇನೆ. ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗಿದ್ದಳು. ಪ್ರತಿದಿನ 7.30 ರೊಳಗೆ ಮನೆಯಲ್ಲಿರುತ್ತಿದ್ದಳು. ನನ್ನ ಮಗಳು ಇದೇ ಶೋ ರೂಂನಲ್ಲಿ ಕಳೆದ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ. ನನ್ನ ಸ್ನೇಹಿತ ಶೋ ರೂಂ ಬಳಿ ಬರಲು ತಿಳಿಸಿದ್ದ. ಬಂದಾಗಲೇ ವಿಷಯ ಗೊತ್ತಾಗಿದೆ. ನನ್ನ ಮಗಳು ಎಲ್ಲಿದ್ದಾಳೆ? ಎಂದು ಕಣ್ಣೀರಿಟ್ಟಿದ್ದಾರೆ.