ಶಿರಸಿ:
ಜನಸ್ಪಂದನ ಅರ್ಜಿಗಳ ಮೇಲಿನ ಕ್ರಮ ಕೈಗೊಳ್ಳುವ ಜವಾಬ್ದಾರಿ ತಹಸೀಲ್ದಾರರ ಮೇಲಿದೆ. ನಾವು ಕೆಲಸವಿಲ್ಲದೆ ಜನಸ್ಪಂದನ ಹಾಗೂ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವುದಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ನಗರದ ಮಿನಿ ವಿಧಾನ ಸೌಧದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “490 ಅರ್ಜಿಗಳಲ್ಲಿ ಯಾವ ಇಲಾಖೆಗೆ ಯಾವ ಜವಾಬ್ದಾರಿ ಎಂಬುದು ಸ್ಪಷ್ಟವಾಗಬೇಕು. ತಹಸೀಲ್ದಾರರಿಗೆ ವರದಿ ಸಲ್ಲಿಸಲು ಸೂಚಿಸಬೇಕಿತ್ತು. ಆದರೆ ಕೇವಲ 4 ಇಲಾಖೆಗಳು ಮಾತ್ರ ವರದಿ ನೀಡಿವೆ. ಉಳಿದವುಗಳೂ ತಕ್ಷಣ ವರದಿ ನೀಡಬೇಕು. ಜನರಿಗೆ ಉತ್ತರ ಕೊಡಬೇಕು. ಅನುದಾನ ಇಲ್ಲದಿದ್ದರೆ ಮುಂದಿನ ಹಂತದಲ್ಲಿ ಸೇರಿಸಿ ಕೆಲಸ ಮಾಡಬಹುದು,” ಎಂದು ಅವರು ಆಕ್ಷೇಪಿಸಿದರು.
ಮಳೆಮಾಪನ ಕೇಂದ್ರಗಳ ದೋಷದಿಂದ ವಿಮೆ ಪರಿಹಾರ ಸರಿಯಾಗಿ ಲಭ್ಯವಾಗುತ್ತಿಲ್ಲ. ಮಳೆಮಾಪನ ಯಂತ್ರಗಳು ದುರಸ್ತಿ ಆಗಿದೆಯೋ ಇಲ್ಲವೋ ಎಂಬುದೂ ಸ್ಪಷ್ಟವಾಗಿಲ್ಲ. ಅವುಗಳ ಸ್ಥಿತಿಯನ್ನು ತಹಸೀಲ್ದಾರರು ಪರಿಶೀಲಿಸಬೇಕು. ಮೇಲ್ವಿಚಾರಣೆಗೆ ವ್ಯವಸ್ಥೆ ಇಲ್ಲದಿದ್ದರೆ ಪಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

“ರೈತರಿಗೆ ಅನ್ಯಾಯವಾಗಬಾರದು. ಮಳೆಮಾಪನಗಳನ್ನು ಸರಿಯಾಗಿ ನಿರ್ವಹಿಸಬೇಕು. ಇಲ್ಲವಾದರೆ ರೈತರಿಗೆ ಮೋಸ ಮಾಡಿದಂತಾಗುತ್ತದೆ. 33 ಮಳೆಮಾಪನ ಕೇಂದ್ರಗಳಲ್ಲಿ 17 ಕಾರ್ಯನಿರ್ವಹಿಸುತ್ತಿಲ್ಲ. ಟೆಂಡರ್ ಕರೆದರೂ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಸ್ವೀಕಾರಾರ್ಹವಲ್ಲ. ಸಂಬಂಧಿತ ಇಲಾಖೆಗಳು ಜವಾಬ್ದಾರಿ ತೆಗೆದುಕೊಳ್ಳಬೇಕು,” ಎಂದು ಅವರು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿ, “ತಾಲೂಕಿನಲ್ಲಿ 338 ಶಾಲೆಗಳಿವೆ. ಬಂಡಲ ಮತ್ತು ಮಾರಿಕಾಂಬಾ ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆಯಾಗಲಿವೆ. ಎಲ್ಲಾ ಶಾಲೆಗಳು ದ್ವಿಮಾಧ್ಯಮವಾಗಲಿವೆ. 179 ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ನೇಮಕಾತಿ ಜೂನ್‌ನಲ್ಲಿ ಸಾಧ್ಯತೆ ಇದೆ. 42 ಹೊಸ ಅಡುಗೆ ಕೋಣೆಗಳಿಗೆ ಅವಕಾಶವಿದೆ. ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ,” ಎಂದು ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿ ಮಧುಕರ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಇದ್ದರೂ ಔಷಧಿಗಳ ಕೊರತೆ ಇಲ್ಲ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಲ್ಲ. 794 ನಾಯಿಕಡಿತ ಪ್ರಕರಣಗಳು ದಾಖಲಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಹಾವು ಕಡಿತಕ್ಕೂ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ನೇತ್ರಾವತಿ ಶಿರಸಿಕರ ಮಾಹಿತಿ ನೀಡಿ, “ಕಳೆದ ಅವಧಿಗೆ ಹೋಲಿಸಿದರೆ ರೋಗಿಗಳ ಸಂಖ್ಯೆ ಶೇ.75ರಷ್ಟು ಹೆಚ್ಚಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಅಗತ್ಯವಿದ್ದಲ್ಲಿ ಔಷಧಿಗಳನ್ನು ಖರೀದಿ ಮಾಡಿ ಪೂರೈಸಲಾಗುತ್ತದೆ,” ಎಂದರು.
ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಜಗದೀಶ ಯಾಜಿ ಮಾತನಾಡಿ, “ಆಸ್ಪತ್ರೆಯ ಹಾಸಿಗೆಗಳು ಸದಾ ಭರ್ತಿಯಾಗಿರುತ್ತವೆ. ಒಬ್ಬರ ಚಿಕಿತ್ಸೆ ಮುಗಿದ ಕೂಡಲೇ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ. 30 ಹಾಸಿಗೆಗಳ ಹೆಚ್ಚುವರಿ ಪ್ರಸ್ತಾವನೆ ಸರ್ಕಾರದ ಮುಂದಿದೆ,” ಎಂದು ಹೇಳಿದರು.
ತೋಟಗಾರಿಕಾ ಅಧಿಕಾರಿ ಸತೀಶ ಹೆಗಡೆ ಮಾಹಿತಿ ನೀಡಿ, ಮಳೆ ಬಂದಾಗ ಎಲೆ ಚುಕ್ಕೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮೇ ಅಂತ್ಯದೊಳಗೆ ಬೋರ್ಡೋ ದ್ರಾವಣವನ್ನು ಎಲೆಗಳ ಮೇಲೂ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ಅರಣ್ಯಾಧಿಕಾರಿ ಉಷಾ ಕಬ್ಬೇರ ಮಾತನಾಡಿ, ಸಿದ್ದಾಪುರ ಗಡಿಯ ಭಾಗದಲ್ಲಿ ಬಾವಲಿ ಕಾಟ ಹೆಚ್ಚಿದ್ದು ಅಡಿಕೆ ಬೆಳೆ ಹಾನಿಗೊಳಗಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಭೀಮಣ್ಣ ನಾಯ್ಕ, ನೊಂದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ ಅಧಿಕಾರಿ ಮಧುಕರ ನಾಯ್ಕ ಮಾಹಿತಿ ನೀಡಿ, ಸುಮಾರು 8 ಶೇಕಡಾ ಮಳೆ ಕೊರತೆ ಸಂಭವಿಸಬಹುದು. ಮಳೆಯ ಹಂಚಿಕೆ ಸಮರ್ಪಕವಾಗಿದ್ದರೆ ದೊಡ್ಡ ಸಮಸ್ಯೆಯಾಗುವುದಿಲ್ಲ ಎಂದರು.
ಇದೇ ವೇಳೆ ಶಾಸಕ ಭೀಮಣ್ಣ ನಾಯ್ಕ ಸೂಚನೆ ನೀಡಿ, ಅಂಗನವಾಡಿ ಹಾಗೂ ಶಾಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಬೀಜ ಹಾಗೂ ಗೊಬ್ಬರಗಳ ಪೂರೈಕೆ ಸಮರ್ಪಕವಾಗಿರಬೇಕು. ಯಾವುದೇ ಕೊರತೆ ಆಗಬಾರದು ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಆಡಳಿತಾಧಿಕಾರಿ ಬಿ.ಪಿ. ಸತೀಶ, ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಪೌರಾಯುಕ್ತ ಪ್ರಕಾಶ ಚಿಣ್ಣಣ್ಣನವರ, ಜಗದೀಶ ಗೌಡ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
