ರಥಾರೂಢಳಾದ ಮಾರಿಕಾಂಬಾ ದೇವಿ… ಭಕ್ತರ ಜಯಘೋಷ… ಆರಂಭವಾದ ಮಹೋತ್ಸವದ ಮಹಾಕಾವ್ಯ

ಶಿರಸಿ:
ರಥಾರೂಢಳಾಗಿ ಬರುವ ಶಿರಸಿಯ ಅಧಿದೇವತೆ ಮಾರಿಕಾಂಬಾ ದೇವಿಯು ಫೆಬ್ರವರಿ 25ರಂದು ಬಿಡಕಿಬೈಲಿನ ಜಾತ್ರಾ ಮಂಟಪದ ಗದ್ದುಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದು, ಇದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯವು ಉತ್ತರ ಕನ್ನಡದ ಅತ್ಯಂತ ಪ್ರಸಿದ್ಧ ಮತ್ತು ಪುರಾತನ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯ ಉತ್ತರ ಕನ್ನಡದಲ್ಲಿದ್ದರು ಕೂಡ ಇದರ ಕೀರ್ತಿ ಸಂಪೂರ್ಣ ಕರ್ನಾಟಕವನ್ನೇ ಆವರಿಸಿಕೊಂಡಿದೆ. ದೇಶ ವಿದೇಶಗಳಿಂದ ಭಕ್ತರು ಈಕೆಯ ಆಶೀರ್ವಾದವನ್ನು ಪಡೆಯಲು ಇಲ್ಲಿಗೆ ಬರುತ್ತಾರೆ. ಎರಡು ವರ್ಷಗಳಿಗೊಮ್ಮ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವವೇ ಇಲ್ಲಿನ ವಿಶೇಷ.

ಮೈತುಂಬ ಆಭರಣಗಳಿಂದ ಅಲಂಕರಿಸಲ್ಪಟ್ಟ ಏಳು ಅಡಿ ಎತ್ತರದ ದೇವಿಯ ಮೂಲಮೂರ್ತಿಯೇ ಗರ್ಭಗುಡಿಯಿಂದ ಹೊರಬಂದು ಜಾತ್ರಾ ಗದ್ದುಗೆಗೆ ಪ್ರತಿಷ್ಠಾಪನೆಗೊಳ್ಳುವುದು ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಸಹಸ್ರಾರು ಭಕ್ತರ ಜಯಘೋಷ, ಹರಕೆ ಸಲ್ಲಿಸುವ ಭಕ್ತರ ಭಾವೋದ್ರೇಕದ ನಡುವೆ ದೇವಿಯನ್ನು ಹೊತ್ತ ರಥವು ಸಾಗುವ ದೃಶ್ಯ ಕಣ್ತುಂಬಿಕೊಳ್ಳುವಂತಹ ಅಪೂರ್ವ ಕ್ಷಣವಾಗಿರಲಿದೆ.

ಮಂಗಳವಾರ ದೇವಾಲಯದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ನಸುಕಿನಲ್ಲಿ ಕಲಶ ಪೂಜೆ ನೆರವೇರಿಸಿ, ಮಧ್ಯಾಹ್ನ ಮರ್ಕಿ–ದುರ್ಗಿ ದೇವಾಲಯಕ್ಕೆ ಪೂಜೆ ಸಲ್ಲಿಸಿದ ನಂತರ ಕಲಶವನ್ನು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಬಾಬುದಾರರು ಹಾಗೂ ಆಡಳಿತ ಸಮಿತಿ ಸದಸ್ಯರು ರಥಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಬಡಿಗೇರರು, ಉಪ್ಪಾರರು, ಮರಾಠಿಗರು ಮತ್ತು ಆಚಾರಿ ಸಮುದಾಯದವರು ರಥಕ್ಕೆ ಪತಾಕೆಗಳನ್ನು ಜೋಡಿಸಿದರು.

ನಡುರಾತ್ರಿ ದೇವಿಯ ಕಲ್ಯಾಣ ಪ್ರತಿಷ್ಠೆ ಹಾಗೂ ಕಲ್ಯಾಣ ಮಹೋತ್ಸವ ನೆರವೇರಿತು. ತವರು ಮನೆಯ ನಾಡಿಗರು ವಧುವಿಗೆ ಧಾರೆಯೆರೆದು ಗಂಡನ ಮನೆಗೆ ಕಳುಹಿಸುವ ಸಂಪ್ರದಾಯವೇ ರಥೋತ್ಸವದ ವಿಶೇಷತೆ. ರಕ್ತಚಂದನ ವರ್ಣದ ಅಷ್ಟಭುಜಧಾರಿ ಮಾರಿಕಾಂಬಾ ದೇವಿಯು ಸಕಲಾಭರಣಗಳೊಂದಿಗೆ ಕಲ್ಯಾಣಿಯಾಗಿ ರಥದಲ್ಲಿ ಆಸೀನಳಾಗಿ, ಕಿಕ್ಕಿರಿದು ಸೇರಿದ ಭಕ್ತರ ನಡುವೆ ನಿಧಾನವಾಗಿ ಸಾಗುವ ದೃಶ್ಯ ಭಕ್ತರಲ್ಲಿ ಭಕ್ತಿಭಾವ ಉಕ್ಕುವಂತೆ ಮಾಡಿತು.

ಬುಧವಾರ ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಮಾರಿಕಾಂಬಾ ದೇವಾಲಯದ ರಥಬೀದಿಯಲ್ಲಿ ಜನಸಾಗರ ಕಂಡುಬಂದಿತು. ದೇವಿಯ ಮೆರವಣಿಗೆಯಲ್ಲಿ ಭಕ್ತರು ಹಣ ಹಾಗೂ ಬಾಳೆಹಣ್ಣುಗಳನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು. ಲಂಬಾಣಿ ಮಹಿಳೆಯರು ಸೋಬಾನೆ ಪದಗಳನ್ನು ಹಾಡುತ್ತ ದೇವಿಗೆ ಸೇವೆ ಸಲ್ಲಿಸಿದರು. ದೇವಿಯನ್ನು ಆವಾಹನೆ ಮಾಡಿಕೊಂಡ ಮಹಿಳೆಯರು ಭಕ್ತಿಭಾವದಿಂದ ಆವೇಶಭರಿತರಾಗಿ ನೃತ್ಯ ಮಾಡಿದರು.

ಫೆಬ್ರವರಿ 26ರ ಬೆಳಿಗ್ಗೆ 5 ಗಂಟೆಯಿಂದ ದೇವಿಗೆ ಹಣ್ಣು–ಕಾಯಿ ಸೇವೆ, ಉಡಿ ತುಂಬುವ ಸೇವೆ ಹಾಗೂ ತುಲಾಭಾರ ಸೇವೆಗಳು ಆರಂಭವಾಗಲಿವೆ. ಮರ್ಕಿ–ದುರ್ಗಿ ದೇವಾಲಯದಲ್ಲಿ ಬೇವಿನ ಉಡುಗೆ ಸೇವೆಗಳು ನಡೆಯಲಿವೆ. ದೇವಾಲಯದ ಹಿಂಭಾಗದ ಮಾರಿಗುಡಿ ಶಾಲೆಯ ಆವರಣದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಜಾತ್ರೆಯ ಎರಡನೇ ದಿನ ದೇವಿಯು ಶೋಭಾಯಾತ್ರೆಯ ಮೂಲಕ ಬಿಡಕಿಬೈಲಿನ ಗದ್ದುಗೆಗೆ ಆಸೀನಳಾದ ಬಳಿಕ ಪೇಟೆಯ ಚಿತ್ರಣವೇ ಬದಲಾಗಲಿದೆ. ಗದ್ದುಗೆಯ ಸುತ್ತಲಿನ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಲಿದೆ. ಜನರು ಗುಂಪು ಗುಂಪಾಗಿ ಬಂದು ದೇವಿ ದರ್ಶನ ಪಡೆದು ಜಾತ್ರೆಯ ಸಂಭ್ರಮವನ್ನು ಆಸ್ವಾದಿಸಲಿದ್ದಾರೆ.

ಈಗಾಗಲೇ ಬಿಡಕಿಬೈಲ್, ಶಿವಾಜಿ ಚೌಕ್, ನಟರಾಜ ರಸ್ತೆ ಹಾಗೂ ಹುಬ್ಬಳ್ಳಿ ರಸ್ತೆ ಭಾಗಗಳಲ್ಲಿ ಮಳಿಗೆಗಳು ತೆರೆಯಲಾಗಿದೆ. ತಿನಿಸು, ಆಟಿಕೆ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಸಜ್ಜಾಗಿವೆ. ಅಮ್ಯೂಸ್‌ಮೆಂಟ್ ಪಾರ್ಕ್ ಈ ವರ್ಷದ ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ.