ಕೋಲ್ಕತ್ತಾ:
ಇದು ನನ್ನ ಕೊನೆಯ ರ‍್ಯಾಲಿ; ಫಲಿತಾಂಶದ ಬಳಿಕ ಪ್ರಮಾಣವಚನ ಸಮಾರಂಭಕ್ಕೆ ಖಂಡಿತವಾಗಿ ಬರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ಮುನ್ನ ಇಂದು (ಏ.27) ಬರ್ರಾಕ್‌ಪುರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಹೆಲಿಪ್ಯಾಡ್‌ನಿಂದ ಸಭಾಸ್ಥಳಕ್ಕೆ ಬರುತ್ತಿದ್ದ ವೇಳೆ ಸುಮಾರು ಎರಡು ಕಿ.ಮೀ ದೂರದವರೆಗೆ ಎರಡೂ ಬದಿಗಳಲ್ಲೂ ಭಾರೀ ಜನಸಮೂಹ ಕಂಡುಬಂದಿತು ಎಂದು ಹೇಳಿದರು. ಬೆಳಗ್ಗೆಯೇ ಇಷ್ಟೊಂದು ಸಂಖ್ಯೆಯಲ್ಲಿ ಜನರು ಆಶೀರ್ವದಿಸಲು ಬಂದಿರುವುದು ನಿರೀಕ್ಷೆಯಲ್ಲ ಎಂದು ತಿಳಿಸಿದರು. ಪಶ್ಚಿಮ ಬಂಗಾಳದಲ್ಲಿ ಇದು ತನ್ನ ಕೊನೆಯ ರ‍್ಯಾಲಿ ಎಂದು ಹೇಳಿದ ಮೋದಿ, ಮೇ 4ರಂದು ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿಯ ಪ್ರಮಾಣವಚನ ಸಮಾರಂಭಕ್ಕೆ ಖಂಡಿತವಾಗಿ ಹಾಜರಾಗುವ ವಿಶ್ವಾಸ ವ್ಯಕ್ತಪಡಿಸಿದರು.

ತೃಣಮೂಲ ಕಾಂಗ್ರೆಸ್ (TMC) ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಕೈಗಾರಿಕೆಗಳು ಕುಸಿದಿವೆ, ಅನೇಕ ಕಾರ್ಖಾನೆಗಳು ಮುಚ್ಚಿವೆ. ಟಿಎಂಸಿ ಸರ್ಕಾರಕ್ಕೆ ಭವಿಷ್ಯದ ಅಭಿವೃದ್ಧಿಗೆ ಸ್ಪಷ್ಟ ರೋಡ್‌ಮ್ಯಾಪ್ ಇಲ್ಲ. ಹೀಗಾಗಿ ಡಬಲ್ ಎಂಜಿನ್ ಸರ್ಕಾರದ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡಿದಾಗಲೇ ವೇಗವಾಗಿ ಅಭಿವೃದ್ಧಿ ಸಾಧ್ಯ. ಟಿಎಂಸಿಯ ಸಿಂಡಿಕೇಟ್ ವ್ಯವಸ್ಥೆಯನ್ನು ಕೊನೆಗೊಳಿಸಬೇಕು. ಟಿಎಮ್‌ಸಿ ಭಯೋತ್ಪಾದನೆ ಮತ್ತು ಅಪಶಬ್ದ ರಾಜಕಾರಣದ ಮೇಲೆಯೇ ಅವಲಂಬಿತವಾಗಿದೆ. ಮಹಿಳೆಯರಿಗೆ ರಾಜ್ಯವು ಅಸುರಕ್ಷಿತವಾಗಿದೆ. ಹೀಗಾಗಿ ಮಹಿಳಾ ಮತದಾರತು ಟಿಎಂಸಿ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಯೋಚಿಸಿ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.
ಕೋಲ್ಕತ್ತಾದ ಬಗ್ಗೆ ಮಾತನಾಡುತ್ತಾ, ಟಿಎಂಸಿ ಕೋಲ್ಕತ್ತಾವನ್ನು ಲಂಡನ್‌ನಂತೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿತ್ತು. ಆದರೆ ಕಳೆದ 15 ವರ್ಷಗಳಲ್ಲಿ ನಗರದ ಗುರುತೇ ಬದಲಾಗಿದೆ. ಅಕ್ರಮ ವಲಸಿಗರು ನಗರದಲ್ಲಿ ನೆಲೆಸುವಂತೆ ಅನುಮತಿ ನೀಡಲಾಗಿದೆ ಆರೋಪಿಸಿ, ಕೋಲ್ಕತ್ತಾ ನಿವಾಸಿಗಳು ನಗರದ ಮೂಲ ಗುರುತನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಯುವಕರಿಗೆ ಐದು ಮುಖ್ಯ ಗ್ಯಾರಂಟಿಗಳನ್ನು ಘೋಷಿಸಿದ ಪ್ರಧಾನಿ ಮೋದಿ, ಸರ್ಕಾರಿ ನೇಮಕಾತಿಗಳನ್ನು ಸಮಯಕ್ಕೆ ಸರಿಯಾಗಿ ನಡೆಸುವುದು, ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದು, ಕೌಶಲ್ಯ ಅಭಿವೃದ್ಧಿಗೆ ಹೊಂದಿಕೊಂಡ ಉದ್ಯೋಗ ಸೃಷ್ಟಿ, 7ನೇ ವೇತನ ಆಯೋಗದ ಪ್ರಯೋಜನಗಳು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹೆಚ್ಚಿಸುವ ಜಿ-ರಾಮ್ ಯೋಜನೆ ಜಾರಿ ಮಾಡಲಾಗುವುದು. ಇನ್ನೂ ರಾಜ್ಯದಲ್ಲಿ ಮಹಿಳೆಯರು ರಾತ್ರಿಯೂ ಸುರಕ್ಷಿತವಾಗಿ ಓಡಾಡುವಂತೆ, ಮಹಿಳೆಯರಿಗೆ ನ್ಯಾಯ ದೊರೆಯುವಂತೆ ಮತ್ತು ಉತ್ತಮ ಕಾನೂನು ಸುವ್ಯವಸ್ಥೆಗಾಗಿ `ಕಮಲ’ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
