ಪ್ರಧಾನಿ ನರೇಂದ್ರ ಮೋದಿ ಅವರು ಡಾ. ರಾಜ್‌ಕುಮಾರ್ ಅವರ ‘ಶ್ರೀ ಚಾಮುಂಡೇಶ್ವರಿ’ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕನ್ನಡಿಗರು ಹಾಗೂ ಅಣ್ಣಾವ್ರ ಅಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿಸಿದೆ.
1970ರಲ್ಲಿ ಬಿಡುಗಡೆಯಾದ ‘ಶ್ರೀ ಕೃಷ್ಣದೇವರಾಯ’ಚಿತ್ರದಲ್ಲಿನ ಈ ಅಮರಗಾನ, ಜಗತ್ಜನನಿ ತಾಯಿಯ ಮೇಲಿನ ಭಕ್ತಿ ಮತ್ತು ನಂಬಿಕೆಯನ್ನು ಮನಮುಟ್ಟುವಂತೆ ವ್ಯಕ್ತಪಡಿಸುತ್ತದೆ.
ಡಾ. ರಾಜ್‌ಕುಮಾರ್ ಅವರ ಅದ್ಭುತ ಗಾನ ಕಲೆ, ಭಕ್ತಿ ಭಾವ ಹಾಗೂ ವಿಶ್ವದಾದ್ಯಂತ ಪಡೆದ ಖ್ಯಾತಿಗೆ ಈ ಘಟನೆ ಮತ್ತೊಂದು ಹೊಳಪು ನೀಡಿದ್ದು, ಕನ್ನಡ ಸಂಸ್ಕೃತಿಯ ಮಹತ್ವವನ್ನು ಮತ್ತೊಮ್ಮೆ ದೇಶದ ಮಟ್ಟದಲ್ಲಿ ಪ್ರತಿಧ್ವನಿಸುತ್ತದೆ.

ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನೀಡಿದ ಸಿನಿಮಾಗಳು ಈಗಲೂ ಅನೇಕರಿಗೆ ಮಾದರಿ. ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಕೇವಲ ಕನ್ನಡದ ಮಾತ್ರವಲ್ಲದೆ, ಪರಭಾಷೆಯ ಮಂದಿಗೂ ರಾಜ್‌ಕುಮಾರ್ ತಿಳಿದಿದ್ದಾರೆ. ರಾಜ್‌ಕುಮಾರ್ ಅವರ ಹಾಡುಗಳು ಕೂಡ ಅನೇಕರ ಫೇವರಿಟ್. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜ್‌ಕುಮಾರ್ ಅವರ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ.
ರಾಜ್‌ಕುಮಾರ್ ಅವರು ಬಾಂಡ್ ಸಿನಿಮಾಗಳಿಂದ ಹಿಡಿದು, ಪೌರಾಣಿಕ ಸಿನಿಮಾಗಳವರೆಗೆ, ಆ್ಯಕ್ಷನ್ ಸಿನಿಮಾದಿಂದ ಹಿಡಿದು ಭಕ್ತಿ ಪ್ರಧಾನ ಸಿನಿಮಾವರೆಗೆ ಎಲ್ಲ ರೀತಿಯ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಕೃಷ್ಣದೇವರಾಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ 1970ರಲ್ಲಿ ರಿಲೀಸ್ ಆಯಿತು.
‘ಶ್ರೀ ಚಾಂಮುಂಡೇಶ್ವರಿ..’ ಹಾಡಿನ ಯೂಟ್ಯೂಬ್ ಲಿಂಕ್ ಶೇರ್ ಮಾಡಿಕೊಂಡಿರೋ ಮೋದಿ, ‘ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ದೈವದ ಭಕ್ತಿ ಸಾರುವ ವಿಡಿಯೋ ಹಂಚಿಕೊಂಡಿದ್ದಾರೆ.
