“ಕರ್ನಾಟಕಕ್ಕೆ ಕೇಂದ್ರದಿಂದ ಭಾರಿ ಅನುದಾನ ಬಿಡುಗಡೆಯಾದರೂ, ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಹಲವು ರೈಲ್ವೆ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಯೋಜನೆಗಳ ವೇಗವಾದ ಅನುಷ್ಠಾನಕ್ಕೆ ರಾಜ್ಯದ ತ್ವರಿತ ಸಹಕಾರ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.”

ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಬಜೆಟ್ ಬೆಂಬಲವನ್ನು ಹೆಚ್ಚಿಸಿದ್ದು, ಹಲವು ರೈಲ್ವೆ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ನಿಧಾನಗೊಳಿಸಿರುವುದರಿಂದ ಪ್ರಮುಖ ರೈಲ್ವೆ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಅವರು ನೀಡಿದ ಮಾಹಿತಿಯ ಪ್ರಕಾರ, ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳಿಗೆ ಒಟ್ಟು 9,020 ಹೆಕ್ಟೇರ್ ಭೂಮಿ ಅಗತ್ಯವಿದೆ. ಇದರಲ್ಲಿ 5,679 ಹೆಕ್ಟೇರ್ (63%) ಮಾತ್ರ ಇದುವರೆಗೆ ಸ್ವಾಧೀನಗೊಂಡಿದ್ದು, 3,341 ಹೆಕ್ಟೇರ್ ಭೂಸ್ವಾಧೀನ ಇನ್ನೂ ಬಾಕಿ ಉಳಿದಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

50:50 ವೆಚ್ಚದಲ್ಲಿ ಧಾರವಾಡ-ಬೆಳಗಾವಿ ಮೂಲಕ ಕಿತ್ತೂರು ಹೊಸ ಮಾರ್ಗ ಯೋಜನೆ (73 ಕಿಮೀ) ಮಂಜೂರಾಗಿತ್ತು. ಆದರೆ, ಭೂಸ್ವಾಧೀನ ಬಾಕಿ ಇರುವುದರಿಂದ ಯೋಜನೆಯ ಅನುಷ್ಠಾನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಒಪ್ಪಂದದ ಪ್ರಕಾರ, ಈ ರೈಲ್ವೆ ಯೋಜನೆಗೆ ರಾಜ್ಯವು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಉಚಿತವಾಗಿ ನೀಡಬೇಕು.
ಭೂಸ್ವಾಧೀನ ಜಟಿಲತೆ: ಇನ್ನೂ ಹಲವಾರು ರೈಲ್ವೆ ಯೋಜನೆಗಳು ವಿಳಂಬ
ಶಿವಮೊಗ್ಗ-ರಾಣೆಬೆನ್ನೂರು ಹೊಸ ಮಾರ್ಗಕ್ಕೆ (96 ಕಿಮೀ) 333 ಹೆಕ್ಟೇರ್, ಬೆಳಗಾವಿ-ಧಾರವಾಡ ಹೊಸ ಮಾರ್ಗಕ್ಕೆ (73 ಕಿಮೀ) 581 ಹೆಕ್ಟೇರ್, ಶಿವಮೊಗ್ಗ-ಹರಿಹರ ಹೊಸ ಮಾರ್ಗಕ್ಕೆ (79 ಕಿಮೀ) 488 ಹೆಕ್ಟೇರ್, ವೈಟ್‌ಫೀಲ್ಡ್-ಕೋಲಾರ ಹೊಸ ಮಾರ್ಗಕ್ಕೆ (53 ಕಿಮೀ) 337 ಹೆಕ್ಟೇರ್ ಮತ್ತು ಹಾಸನ-ಬೇಲೂರು ಹೊಸ ಮಾರ್ಗಕ್ಕೆ (32 ಕಿಮೀ) 206 ಹೆಕ್ಟೇರ್ ಭೂಸ್ವಾಧೀನ ಬಾಕಿ ಉಳಿದಿವೆ. ಇದೇ ಕಾರಣಕ್ಕೆ ಈ ಯೋಜನೆಗಳ ಅನುಷ್ಠಾನ ಭಾರಿ ವಿಳಂಬವಾಗುತ್ತಿದೆ.
ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು, ಭೂಸ್ವಾಧೀನ, ಶಾಸನಬದ್ಧ ಅನುಮತಿಗಳು, ಅರಣ್ಯ ಇಲಾಖೆ ಅನುಮತಿಗಳು ಇತರ ಪರಿಸ್ಥಿತಿಗಳನ್ನು ಅವಲಂಬಿಸಿ ರೈಲ್ವೆ ಯೋಜನೆಗಳ ವೆಚ್ಚ ಹೆಚ್ಚಾಗಬಹುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
