
ಸೂಪರ್‌ಸ್ಟಾರ್ ರಜನಿಕಾಂತ್ ಇಂದು 74ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಬಸ್ ಕಂಡಕ್ಟರ್ ಆಗಿ ಜೀವನ ಆರಂಭಿಸಿ 430 ಕೋಟಿಯ ಸಾಮ್ರಾಟನಾಗಿ ಬೆಳೆದ ‘ತಲೈವಾ’ ಅವರ ಬದುಕು ಸ್ಫೂರ್ತಿದಾಯಕ ಕಥೆಯಾಗಿದೆ. 75ರ ವಯಸ್ಸಿನಲ್ಲೂ ಕೋಟಿಗಟ್ಟಲೆ ಸಂಭಾವನೆ ಆಕರ್ಷಿಸುತ್ತಿರುವ ರಜನಿಕಾಂತ್ ಅವರ ವೃತ್ತಿಜೀವನ, ಆಸ್ತಿ–ಪಾಸ್ತಿ ಮತ್ತು ಬ್ಲಾಕ್‌ಬಸ್ಟರ್ ಚಿತ್ರಗಳ ಯಶೋಗಾಥೆ ಇನ್ನೂ ಅದೇ ದಿಟ್ಟತನದಿಂದ ಮುಂದುವರಿದಿದೆ. ಅವರ ಜನಪ್ರಿಯತೆ ಕಾಲ ಕಳೆದರೂ ಏರಿಕೆಯಾಗುತ್ತಲೇ ಇದೆ.
ರಜನಿಕಾಂತ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಬಜೆಟ್ ಮತ್ತು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. 1975 ರಲ್ಲಿ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ, ರಜನಿಕಾಂತ್ ದಕ್ಷಿಣದಿಂದ ಬಾಲಿವುಡ್‌ವರೆಗೆ ಸಾಕಷ್ಟು ಖ್ಯಾತಿಯನ್ನು ಗಳಿಸಿದರು. ನಟನೆಗೆ ಬರುವುದಕ್ಕೂ ಮೊದಲು ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು. ಇಂದು, ಅವರು ಕೋಟ್ಯಂತರ ರೂಪಾಯಿಗಳ ಮಾಲೀಕರಾಗಿದ್ದಾರೆ.
ಆರಂಭದ ದಿನಗಳಲ್ಲಿ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?
ರಜನಿಕಾಂತ್ ಡಿಸೆಂಬರ್ 12, 1950 ರಂದು ಕರ್ನಾಟಕದ ಬೆಂಗಳೂರಿನಲ್ಲಿರುವ ಮರಾಠಿ ಕುಟುಂಬದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಶಿವಾಜಿರಾವ್ ಗಾಯಕ್ವಾಡ್. ನಟನಾಗುವ ಮೊದಲು ಅವರು ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ತಿಂಗಳಿಗೆ 750 ರೂ. ಸಂಬಳ ಸಿಗುತ್ತಿತ್ತು. ಇದರ ಪ್ರಕಾರ, ಅವರ ಮೊದಲ ಸಂಬಳ 750 ರೂ.

ಒಂದು ಕಾಲದಲ್ಲಿ ತಿಂಗಳಿಗೆ 750 ರೂಪಾಯಿ ಸಂಪಾದಿಸುತ್ತಿದ್ದ ರಜನಿಕಾಂತ್, ಚಿತ್ರರಂಗಕ್ಕೆ ಬಂದ ನಂತರ ತಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು. ತಮ್ಮ 50 ವರ್ಷಗಳ ನಟನಾ ವೃತ್ತಿಜೀವನದಲ್ಲಿ 430 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಪೋಯೆಸ್ ಗಾರ್ಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆಯ ಬೆಲೆ ಸುಮಾರು 35 ಕೋಟಿ ರೂಪಾಯಿಗಳು. ಅವರ ಬಳಿ ಬಿಎಂಡಬ್ಲ್ಯೂ ಎಕ್ಸ್ 7 ಸೇರಿದಂತೆ ಅನೇಕ ದುಬಾರಿ ಕಾರುಗಳು ಇವೆ.
ರಜನಿಕಾಂತ್ ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ‘ಜೈಲರ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕೆಲವು ಚಿತ್ರಗಳಲ್ಲಿ ಅವರು ನಟಿಸಬೇಕಿದೆ. 2027ರ ವೇಳೆಗೆ ಅವರು ನಟನೆಗೆ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ.
