ಬೆಂಗಳೂರು, ಡಿ.03: ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಬ್ರಿಗೇಡ್ ರೋಡ್, ಎಂಜಿ ರೋಡ್ಗಳಲ್ಲಿನ ಪಬ್ಗಳಲ್ಲಿ ಪಾರ್ಟಿ ಜೋರಾಗಿರುತ್ತದೆ. ಈ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾತನಾಡಿ, ಲಾಡ್ಜ್, ರೆಸ್ಟೋರೆಂಟ್ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಣ್ಣು ಇಡಲಾಗಿದೆ. ಡ್ರಗ್ ಕೇಸ್ನಲ್ಲಿ 380 ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಗಳ ಮನೆಯಲ್ಲಿ ತಪಾಸಣೆ ಮಾಡಲಾಗಿದೆ. 1630 ಬಾರ್ ಆ್ಯಂಡ್ ರೆಸ್ಟೊರೆಂಟ್ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ರೌಡಿಗಳನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಎಂಒಬಿ ಅನ್ನೂ ವಿಚಾರಣೆ ಮಾಡಲಾಗಿದೆ ಎಂದು ತಿಳಸಿದ್ದಾರೆ. ವಿಸಾ ಅವಧಿ ಮುಗಿದರೂ ಕೆಲವು ವಿದೇಶಿಗರು ಇಲ್ಲೇ ವಾಸವಿಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 29 ಮಂದಿ ವಿದೇಶಿಗರನ್ನು ಎಫ್ಆರ್ಆರ್ಒ ಮುಂದೆ ಹಾಜರು ಪಡಿಸಲಾಗದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಮಾದಕ ವಸ್ತು ಸಾಗಟ ಜಾಲ ಪತ್ತೆ ಹಚ್ಚಿದ್ದರು. ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಒಟ್ಟು 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದರು.
ಹೊಸ ವರ್ಷಾಚರಣೆಗೆ ಕ್ವಿಂಟಾಲ್ಗಟ್ಟಲೆ ಗಾಂಜಾ ಸಪ್ಲೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು. ಪೊಲೀಸರು ಆರೋಪಿಗಳಿಂದ 3.25 ಕೋಟಿ ರೂ. ಮೌಲ್ಯದ 318 ಕೆಜಿ ಗಾಂಜಾ ಜಪ್ತಿ ಮಾಡಿದ್ದರು.
ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದರು. ಬಂಧಿತರ ಬಳಿಯಿದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಹೊಸ ವರ್ಷಾಚರಣೆಗೆಂದು ಆರೋಪಿಗಳು ಸೋಲದೇವನಹಳ್ಳಿ ಬಳಿ ಡ್ರಗ್ಸ್ ಸಂಗ್ರಹಿಸಿದ್ದರು.
ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾಳಿ ಮಾಡಿದರು. ದಾಳಿ ವೇಳೆ, 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಪತ್ತೆಯಾಗಿವೆ. ಕೂಡಲೆ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ಮಾದಕ ವಸ್ತು ಜಪ್ತಿ ಮಾಡಿದ್ದರು.