ಭಾರತೀಯ ಮಾರುಕಟ್ಟೆಯಲ್ಲಿ ಚೀನೀ ಬ್ರ್ಯಾಂಡ್‌ಗಳಿಗೆ ಶಾಕ್; ಐಫೋನ್ ಮತ್ತು ಸ್ಯಾಮ್ಸಂಗ್‌ಗೆ ಧಕ್ಕೆಯೇ ಇಲ್ಲ

2024–25ರಲ್ಲಿ ಭಾರತದಲ್ಲಿ ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳ ಆದಾಯ ಕುಸಿತ ಕಂಡಿದೆ. ಭಾರತದಲ್ಲಿ ಚೀನೀ ಕಂಪನಿಗಳು ಈ ರೀತಿಯ ಆದಾಯ ಇಳಿಕೆಯನ್ನು ದಾಖಲಿಸಿರುವುದು ಇದೇ ಮೊದಲು. ಒಟ್ಟಾರೆ ಸ್ಮಾರ್ಟ್‌ಫೋನ್ ಮಾರಾಟ ಸಂಖ್ಯೆಯಲ್ಲಿ ಚೀನೀ ಬ್ರ್ಯಾಂಡ್‌ಗಳ ಪ್ರಾಬಲ್ಯ ಮುಂದುವರಿದಿದ್ದರೂ, ಮಾರಾಟ ಮೌಲ್ಯದ ದೃಷ್ಟಿಯಿಂದ ಇಳಿಕೆ ಕಂಡುಬಂದಿದೆ.

ನವದೆಹಲಿ

 ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಹಲವಾರು ವರ್ಷಗಳಿಂದ ತಮ್ಮ ಬಿಗಿಮುಷ್ಟಿಗಳಲ್ಲಿ ಇಟ್ಟುಕೊಂಡಿದ್ದ ಚೀನೀ ಕಂಪನಿಗಳ ಪಾರಮ್ಯ ಮೊದಲ ಬಾರಿಗೆ ದುರ್ಬಲಗೊಂಡಿದೆ. ಭಾರತದಲ್ಲಿ ಅದು ನಿರ್ಮಿಸಿಕೊಂಡಿದ್ದ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ (2024-25) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಚೀನೀ ಬ್ರ್ಯಾಂಡ್ ಸ್ಮಾರ್ಟ್​ಫೋನ್ ಕಂಪನಿಗಳ ಆದಾಯದಲ್ಲಿ ಕುಸಿತವಾಗಿದೆ. ಶವೋಮಿ, ಓಪ್ಪೋ, ಒನ್​ಪ್ಲಸ್ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಮುಖವಾಗಿದೆ.

ವರದಿ ಪ್ರಕಾರ, ಭಾರತದಲ್ಲಿ ಬ್ಯುಸಿನೆಸ್ ಮಾಡುತ್ತಿರುವ ಚೀನಾದ 9 ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳ ಒಟ್ಟಾರೆ ಆದಾಯ 2024-25ರಲ್ಲಿ ಶೇ. 4.5ರಷ್ಟು ಕಡಿಮೆ ಆಗಿದೆ. ಹಿಂದಿನ ವರ್ಷದಲ್ಲಿ ಈ ಕಂಪನಿಗಳು ಶೇ. 42ರಷ್ಟು ಆದಾಯ ಹೆಚ್ಚಳ ಕಂಡಿದ್ದವು.

ಒಟ್ಟಾರೆ ಫೋನ್ ಮಾರಾಟ ಸಂಖ್ಯೆಯಲ್ಲಿ ಚೀನೀ ಪ್ರಾಬಲ್ಯ ಮುಂದುವರಿಕೆ

ಅತಿಹೆಚ್ಚು ಸ್ಮಾರ್ಟ್​ಫೋನ್​ಗಳು ಮಾರಾಟ ಆಗುತ್ತಿರುವುದು ಚೀನೀ ಬ್ರ್ಯಾಂಡ್​ನವೇ. 2024-25ರಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳಲ್ಲಿ ಚೀನೀ ಕಂಪನಿಗಳ ಪಾಲು ಶೇ. 73-75ರಷ್ಟು ಇದೆ. ಆದರೆ, ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು ಕಡಿಮೆ ಆಗಿದೆ. 2023ರಲ್ಲಿ ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಪಾಲು ಶೇ. 54 ಇತ್ತು. 2024ರಲ್ಲಿ ಅದು ಶೇ. 48ಕ್ಕೆ ಇಳಿಕೆ ಆಗಿದೆ.

20,000 ರೂಗಿಂತ ಕಡಿಮೆ ಬೆಲೆಯ ಸ್ಮಾರ್ಟ್​​ಫೊನ್​ಗಳ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು 2023ರಲ್ಲಿ ಶೇ. 38 ಇದ್ದದ್ದು 2025ರಲ್ಲಿ ಶೇ. 29ಕ್ಕೆ ಇಳಿದಿದೆ.

ಬಜೆಟ್ ಫೋನ್​ಗಳ ಮಾರಾಟ ಪ್ರಮಾಣ ಕಡಿಮೆ ಆಗುತ್ತಿದೆ. ಹೆಚ್ಚಿನ ಮೌಲ್ಯದ ಸ್ಮಾರ್ಟ್​ಫೋನ್​ಗಳ ಮಾರಾಟ ಏರುತ್ತಿರುವುದನ್ನು ಇದು ತೋರಿಸುತ್ತದೆ. 45,000 ರೂಗಿಂತ ಹೆಚ್ಚಿನ ಮೌಲ್ಯದ ಪ್ರೀಮಿಯಮ್ ಸೆಗ್ಮೆಂಟ್ ಸ್ಮಾರ್ಟ್​ಫೋನ್​ಗಳ ರೀಟೇಲ್ ಮಾರಾಟ ಮೌಲ್ಯ 2023ರಲ್ಲಿ ಶೇ. 36 ಇದ್ದದ್ದು 2025ರಲ್ಲಿ ಶೇ. 47ಕ್ಕೆ ಏರಿದೆ.

ಉನ್ನತ ಸ್ತರದ ಫೋನ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರ ಲಾಭ ಆ್ಯಪಲ್ ಮತ್ತು ಸ್ಯಾಮ್ಸುಂಗ್ ಕಂಪನಿಗಳಿಗೆ ದಕ್ಕುತ್ತಿದೆ. ಚೀನೀ ಕಂಪನಿಗಳ ಪೈಕಿ ವಿವೊ ಉತ್ತಮ ಸಾಧನೆ ತೋರಿದೆ. ಶೇ. 11ರಷ್ಟು ಆದಾಯ ಏರಿಕೆ ಕಂಡಿದೆ. ಪ್ರೀಮಿಯಮ್ ಸೆಗ್ಮೆಂಟ್​ನಲ್ಲಿ ಇದರ ಪ್ರಬಲ ಉಪಸ್ಥಿತಿ ಇರುವುದರಿಂದ ಆದಾಯ ಕಾಯ್ದುಕೊಳ್ಳಲು ಅದಕ್ಕೆ ಸಾಧ್ಯವಾಗಿದೆ.