ಹೊನ್ನಾವರ:
25 ವರ್ಷಗಳ ಹಿಂದೆ ಹೊನ್ನಾವರ ತಾಲೂಕಿನ ಉಪ್ಪೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಟ್ಟ ಕಾನನದ ನಡುವೆ ಸ್ಥಾಪನೆಯಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024-25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿಯನ್ನು ಪಡೆದುಕೊಂಡು ಮಾದರಿ ಶಾಲೆಯಾಗಿ ಹೊರಹೊಮ್ಮಿದೆ.

2000 ನೇ ವರ್ಷದಲ್ಲಿ ತಾಳೆಗರಿಯ ಬಿಡಾರದಲ್ಲಿ ಪ್ರಾರಂಭವಾದ ಶಾಲೆಯು ಕ್ರಮೇಣ ತಾರಸಿಯ ಕಟ್ಟಡದಲ್ಲಿ ವಿದ್ಯಾದಾನ ಮಾಡುತ್ತಾ ಅಭಿವೃದ್ಧಿ ಪಥದತ್ತ ದಾಪುಗಾಲು ಇಟ್ಟಿತು. ಸದಾ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಳ್ಳುತ್ತಾ ಬಂದಿರುವ ಶಾಲೆ ಕರೋನಾ ಸಂದರ್ಭದಲ್ಲಿ ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಎಂಟು ಕಿಲೋಮೀಟರ್ ದೂರದಿಂದ ವೈಫೈ ಇಂಟರ್ನೆಟ್ ಕೇಬಲ್ ಅನ್ನು ಗ್ರಾಮಸ್ಥರು ಶ್ರಮದಾನದಿಂದ ಎಳೆದು ತಂದು ಇಡೀ ಗ್ರಾಮವನ್ನು ಅಂತರ್ಜಾಲಮಯವನ್ನಾಗಿ ಮಾಡಿ ಶಾಲಾ ಅಂಗಳದಲ್ಲಿ ಪುಟಾಣಿ ಅಂತರ್ಜಾಲ ಜಗತ್ತನ್ನು ಅನಾವರಣ ಮಾಡಿ ಆನ್ಲೈನ್ ತರಗತಿಗಳನ್ನು ನಡೆಸಿ ಮಕ್ಕಳಿಗೆ ವಿದ್ಯಾದಾನ ಮಾಡಿದ್ದು ಅವಿಸ್ಮರಣೀಯವಾದ ಸಾಧನೆಯಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ: ಇಲ್ಲಿನ ಶಾಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಾದ ನವೋದಯ ಅಂಬೇಡ್ಕರ್ ವಸತಿ ಶಾಲೆ ಪರೀಕ್ಷೆಗಳಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಾದ ಕಲಿಕಾ ಹಬ್ಬ, ಪ್ರತಿಭಾ ಕಾರಂಜಿ ಅಂತಹ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದವರೆಗೆ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 15 ರಿಂದ 20 ಬಹುಮಾನಗಳನ್ನು ಪಡೆದುಕೊಂಡು ಕಿರಿಯ ಶಾಲೆಯಾದರೂ ಹಿರಿಯ ಸಾಧನೆ ಮಾಡುತ್ತಾ ಬಂದಿರುತ್ತದೆ. 2025 ರಲ್ಲಿ ಐತಿಹಾಸಿಕ ರಜತ ಮಹೋತ್ಸವ ಕಾರ್ಯಕ್ರಮವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

ಆಧುನಿಕ ತಂತ್ರಜ್ಞಾನದ ಅಳವಡಿಕೆ,ಅಭಿವೃದ್ದಿ ಮೂಲಕ ಗುಣಾತ್ಮಕ ಶಿಕ್ಷಣ ಪೂರೈಕೆ: ಶಾಲೆಯು ವೈಫೈ ಇಂಟರ್ನೆಟ್, ಸ್ಮಾರ್ಟ್ ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್, ಪ್ರಿಂಟರ್, ಇನ್ವರ್ಟರ್, ಗ್ರೀನ್ ಬೋರ್ಡ್ಗಳು, ಪಾಟೋಪಕರಣಗಳು, ಪೀಠೋಪಕರಣ, ವಿಶಾಲವಾದ ಆಟದ ಮೈದಾನ ಮತ್ತು ಆಟದ ಸಾಮಗ್ರಿಗಳು, ಶಾಲಾ ಕೈತೋಟ, ದ್ವಾರಮಂಟಪ, ಸುಂದರವಾದ ತಡೆಗೋಡೆ, ಅತ್ಯಾಕರ್ಷಕ ಚಿತ್ರಗಳು, ಇಂಟರ್ಲಾಕ್ ಮತ್ತು ಸುಂದರವಾದ ಧ್ವಜದ ಕಟ್ಟೆ, ಎರಡು ತರಗತಿ ಕೊಠಡಿ, ಉಗ್ರಾಣ ಕೋಣೆ, ಅಡುಗೆ ಕೋಣೆ, ಶೌಚಾಲಯ, ಹೀಗೆ ಎಲ್ಲಾ ಸೌಕರ್ಯಗಳನ್ನು ಪಡೆದುಕೊಂಡು ಮಾದರಿ ಶಾಲೆಯಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇಂತಹ ಶಾಲೆಗೆ ಈ ವರ್ಷ ಉತ್ತಮ ಎಸ್ಡಿಎಂಸಿ ಪ್ರಶಸ್ತಿ ಬಂದಿರುವುದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ. ಹಗಲಿರುಳೆನ್ನದೆ ಬೆವರು ಸುರಿಸಿ ಶ್ರಮದಾನ ಮಾಡಿದ ಕೈಗಳಿಗೆ ಸಂತ್ರಪ್ತಿ ಭಾವ ಮೂಡಿದೆ.
ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ ಶಾಲೆ: ಇಲ್ಲಿನ ಪಾಲಕ ಪೋಷಕರು, ಎಸ್ ಡಿ ಎಂ ಸಿ, ಪೂರ್ವ ವಿದ್ಯಾರ್ಥಿಗಳು, ಮತ್ತು ಗ್ರಾಮಸ್ಥರ ಅನೇಕ ದಿನಗಳ ಬೆವರಿನ ಹನಿಗೆ ಗೌರವ ದೊರೆತಂತಾಗಿದೆ. ಶಾಲೆಯಲ್ಲಿ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಶಿಕ್ಷಕರ ಸೇವಾ ಕಾರ್ಯಕ್ಕೆ ಬೆಲೆ ಸಿಕ್ಕಂತಾಗಿದೆ. ಇಂತಹ ಶಾಲೆಗಳಿಂದ ಇಲಾಖೆಯ ಗೌರವ ಖಂಡಿತವಾಗಿಯೂ ಹೆಚ್ಚಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಶಾಲೆಗಳಿಗೆ ಪ್ರಶಸ್ತಿಗಳು ದೊರಕುವದರಿಂದ ಪ್ರಶಸ್ತಿಯ ಮೌಲ್ಯ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಈ ಶಾಲೆಯು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಬಡ್ತಿ ಹೊಂದಲಿ ಎನ್ನುವ ಶುಭ ಹಾರೈಕೆಗಳು.
