‘ಅರಸ ಮುಟ್ಟದ ಗ್ರಾಮ’ ಸಂಕೊಳ್ಳಿಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ: ಶೀಲಾಮಯ ದೇವಸ್ಥಾನ ಸಮರ್ಪಣೆ

ಹೊನ್ನಾವರ:
ತಾಲೂಕಿನ ಹಳದಿಪುರ ಸಂಕೊಳ್ಳಿ ಶ್ರೀ ಗೋಳಿಬೀರಪ್ಪ ದೇವಸ್ಥಾನ, ಶ್ರೀ ಶಾಂತಿಕಾಪರಮೇಶ್ವರಿ ದೇವಿ, ಶ್ರೀ ಹಳ್ಳಗಿರಿ, ಶ್ರೀ ಮಳ್ಳಗಿರಿ ದೇವಾಲಯದ ನೂತನ ಶೀಲಾಮಯ ಕಟ್ಟಡದ ಸಮರ್ಪಣಾ ಮಹೋತ್ಸವ ಹಾಗೂ ಶ್ರೀ ಮಾತೆ ಶಾಂತಿಕಾಪರಮೇಶ್ವರಿ ದೇವಿ ಹಾಗೂ ಪರಿವಾರ ದೇವರುಗಳ ಪ್ರತಿಷ್ಠಾಪನೆ ಮತ್ತು ಚಂಡಿಕಾಹವನ ಹಾಗೂ ಶ್ರೀ ಮಾಚಿಕಾಲಮ್ಮ ದೇವಿಯ ಕಲಾಭಿವೃದ್ಧಿ ಮತ್ತು ಚಂಡಿಕಾಹವನ ಫೆ.19ರಿಂದ ಫೆ.23ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಈ ಕುರಿತು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜನಾರ್ಧನ ನಾಯ್ಕ ದೇವಾಲಯದ ಆವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅದ್ಭುತ ಶಕ್ತಿಯುಳ್ಳ ಶ್ರೀ ಗೋಳಿಬೀರಪ್ಪ ದೇವರ ಬ್ರಹ್ಮಗೋಪುರವು 50 ವರ್ಷಗಳ ಹಿಂದೆ ನಿರ್ಮಾಣವಾಗಿ ವಾತಾವರಣದ ವೈಪರಿತ್ಯಗಳಿಂದಾಗಿ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಶೀಘ್ರಾತಿಶೀಘ್ರವಾಗಿ ಈ ಗೋಪುರವನ್ನು ತೆಗೆದು ಹೊಸ ಬ್ರಹ್ಮ ಗೋಪುರ ನಿರ್ಮಿಸುವುದು ನಮ್ಮೇಲ್ಲರ ಜವಾಬ್ದಾರಿಯಾಗಿತ್ತು. ಅಂತಯೇ ಶಿಲಾಮಯ ಹೊಸಗರ್ಬಗುಡಿ ನಿರ್ಮಿಸಿ ಅದಕ್ಕೆ ತಾಮ್ರದ ತಗಡಿನ ಹೊದಿಕೆ ಸಹಿತ ಬ್ರಹ್ಮಗೋಪುರ ನಿರ್ಮಿಸುವ ಸಂಕಲ್ಪ ಮಾಡಲಾಗಿತ್ತು‌. ಶ್ರೀ ದೇವರ ಅಪ್ಪಣೆಯಂತೆ ವಾಸ್ತು ತಜ್ಞರ ಸಲಹೆಯ ಪ್ರಕಾರ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣವಾಗಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮದರ್ಶಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯದರ್ಶಿ ರತ್ನಾಕರ ನಾಯ್ಕ ದೇವಾಲಯದ ಇತಿಹಾಸ ಹಾಗೂ ಇಲ್ಲಿನ ಮಹಿಮೆಯ ಕುರಿತು ಮಾತನಾಡಿ, ಸಂಕೋಳ್ಳಿ ಗೋಳಿಬೀರಪ್ಪ ದೇವಸ್ಥಾನವು ಅತ್ಯಂತ ಜಾಗೃತ ಕ್ಷೇತ್ರಗಳಲ್ಲಿ ಒಂದೆನಿಸಿದೆ. ಭಕ್ತಿಯಿಂದ ಶ್ರೀ ದೇವರನ್ನು ಮನಸಿನಲ್ಲೆ ನೆನಸಿಕೊಂಡರೂ ಅವರ ಇಷ್ಟಾರ್ಥಗಳು ನೆರವೇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಜನ ಸಾಮಾನ್ಯರಲ್ಲಿ ಹಲವಾರು ನಿದರ್ಶನಗಳು ಸಿಗುತ್ತವೆ. ಇದಕ್ಕೆ ಪುಷ್ಟಿಯಾಗಿ 1350 ವರ್ಷಗಳ ಹಿಂದೆ ಗೇರುಸೊಪ್ಪೆಯನ್ನು ಕೇಂದ್ರವಾಗಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಆಳುತ್ತಿದ್ದ ಜೈನ ಅರಸಿ ಚೆನ್ನಭೈರವಿ ದೇವಿಯ ಆಶ್ರಯದಲ್ಲಿದ್ದ ಜೈನಮುನಿ ಸುಮಂತಭದ್ರರಿಂದ ನಿರ್ಮಾಣಗೊಂಡ 72 ಬಸದಿಗಳಲ್ಲಿ ಸಂಕೊಳ್ಳಿಯೂ ಒಂದು, ಅರಸ ಭೈರವ ಪದ್ಮರಸನ ಕಾಲದಲ್ಲಿ ಕೆಳದಿಯ ದೊರೆಗಳ ಆಕ್ರಮಣ, ಆ ಸಂದರ್ಭದಲ್ಲಿ ತನ್ನ ಶೀಲ ರಕ್ಷಣೆಗಾಗಿ ಶಿಲೆಯಾಗಿ ನಿಂತ ಮಹಾಮಾತೆ ಮಹಾಸತಿ ಕಾಲಮ್ಮ ಕಾಲಾನುಕ್ರಮಣಿಕೆಯಲ್ಲಿ ಮಾಚಿಕಾಲಮ್ಮ ಎಂದೆನಿಸಿದಳು. ಅಂದು ಅಪಾರ ಸೈನ್ಯದೊಂದಿಗೆ ದಂಡೆತ್ತಿ ಬಂದ ದೇವನಾಯ್ಕ ರಾತ್ರಿ ಕಳೆಯಲೆಂದು ಸಂಕೊಳ್ಳಿಯ ಹೊರವಲಯದಲ್ಲಿ ಸೈನ್ಯದೊಂದಿಗೆ ತಂಗಿದ್ದ. ಆದರೆ ಬೆಳಗಾಗುವುದರೊಳಗೆ ಸೇನೆಯ ಎಲ್ಲಾ ಕುದುರೆಗಳ ಕಾಲುಗಳು ಮುರಿದು ಬಿದ್ದಿರುವುದನ್ನು ಕಂಡು ದಿಗ್ಧಾಂತನಾದ ದೇವನಾಯ್ಕ, ಈ ಪವಾಡದ ಕುರಿತು ಆಸ್ಥಾನ ಪಂಡಿತರಲ್ಲಿ ವಿಚಾರಿಸಲಾಗಿ, ಆಕ್ರಮಣಕ್ಕಾಗಿ ಬಂದ ಸೈನ್ಯದ ಕುದುರೆಗಳ ಕಾಲನ್ನು ಸಂಕೊಳ್ಳಿಯ ಪ್ರಭಲ ರಕ್ಷಕರಾಗಿರುವ ಜೈನ ಪ್ರತಿಷ್ಠಾಪಿತ ದೇವತೆಗಳು ನೀಡಿದ ಪ್ರತಿ ಆಕ್ರಮಣದ ಸಂದೇಶವಿದು ಎಂದರಿತ. ಬಂಡಿಹಬ್ಬದಲ್ಲಿ ಕುಂಟು ಕುದುರೆ ಎಂಬ ವಿಶೇಷ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ.ಆದರೆ ಗರ್ವಿಷ್ಠನಾದ ದಂಡನಾಯಕ ಅಂದಿನ ಧರ್ಮಾಧಿಕಾರಿ ಪಾಯಶೆಟ್ಟಿಯ ಮಾತನ್ನು ನಂಬದೇ ಗ್ರಾಮದ ಶಕ್ತಿದೇವರುಗಳಾದ ಶ್ರೀ ಗೋಳಿಬೀರಪ್ಪ ದೇವರ ಶಕ್ತಿ ಪರೀಕ್ಷೆಗೆ ಮುಂದಾಗಿ ಸೋಲನ್ನಪ್ಪಿ ಗ್ರಾಮದ ಯಾವ ವಸ್ತುವನ್ನೂ ಮುಟ್ಟದೆ, ಭಕ್ತನಾಗಿ ತನ್ನ ಬಳಿಯಿದ್ದ ನವರತ್ನದ ಹಾರವನ್ನು ಅರ್ಪಿಸಿ ಮರಳಿದ. ಅಂದಿನಿಂದ “ಅರಸ ಮುಟ್ಟದ ಗ್ರಾಮ” ವೆಂದು ಖ್ಯಾತಿಗೊಂಡಿತು.. ಅಂದು ಆತ ಅರ್ಪಿಸಿದ ನವರತ್ನದ ಹಾರ ಇಂದಿಗೂ ಶ್ರೀ ಗೋಳಿಬೀರಪ್ಪನ ಕೊರಳಲ್ಲಿ ರಾರಾಜಿಸುತ್ತಿರುವುದು ನಡೆದ ಸತ್ಯ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದರು.

ದೇವಾಲಯದ ಪ್ರಧಾನ ಅರ್ಚಕರಾದ ರಮೇಶ ಗುನಗಾ, ಮಾತನಾಡಿ, ಆಡಳಿತ‌ಮಂಡಳಿಯ ಜೊತೆಗೆ ಊರ-ನಾಗರಿಕರು, ಭಕ್ತವೃಂದ ಕೈಜೋಡಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜಿಸಲು ತಯಾರಿ ನಡೆಸಿದೆ. ಎಲ್ಲರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಖಜಾಂಚಿ ಅಶೋಕ ನಾಯ್ಕ,ಸಹಕಾರ್ಯದರ್ಶಿ ಸುರೇಶ ನಾಯ್ಕ,ಅರ್ಚಕರಾದ ನಾಗರಾಜ‌ ಗುನಗಾ,ಮಂಜುನಾಥ ಗುನಗಾ,ದತ್ತಾತ್ರೇಯ ಗುನಗಾ,ವಿನಾಯಕ ಗುನಗಾ,ಆಡಳಿತ ಮಂಡಳಿ ಸದಸ್ಯರಾದ ಶಿವಾನಂದ ನಾಯ್ಕ,ದಾಮೋದರ ಗೌಡ,ಮಹೇಶ ನಾಯ್ಕ,ಸಂದೀಪ ನಾಯ್ಕ ಸೇರಿದಂತೆ 31 ಸದಸ್ಯರು, ಹಾಲಕ್ಕಿ ಸಮಾಜದ ಪ್ರಮುಖರು, ಊರನಾಗರಿಕರು ಪಾಲ್ಗೊಂಡಿದ್ದರು.