ಹೊನ್ನಾವರ ತಾಲೂಕಿನ ಅರೇಅಂಗಡಿಯಲ್ಲಿ 16ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ಜರುಗಿತು

ಹೊನ್ನಾವರ: ತಾಲೂಕಿನ ಅರೇಅಂಗಡಿ ಕೇಶವಪಾಲದ ಶ್ರೀ ಮಹಾಸತಿ ಗೆಳೆಯರ ಬಳಗದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 16 ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ್ ಸೋನಿ ಜ್ಯೋತಿ ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು “ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದರೂ, ಉತ್ತಮ ನೌಕರಿ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಸೂಕ್ತ ಮಾರ್ಗದರ್ಶನದ ಕೊರತೆಯೇ ಇದಕ್ಕೆ ಕಾರಣ. ನನಗೆ ಅಧಿಕಾರ ಸಿಕ್ಕರೆ ವರ್ಷದಲ್ಲಿ ಕನಿಷ್ಠ ಎರಡುನೂರು ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಕೊಡಿಸುವ ಮನಸ್ಸಿದೆ. ಇನ್ನು ಬಡವರು ಹೃದಯ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗಳಿಗೆ ಹೋಗಿ ಲಕ್ಷ ಲಕ್ಷ ಖರ್ಚು ಮಾಡುವ ಬದಲು, ಬೆಂಗಳೂರು ಜಯದೇವ ಆಸ್ಪತ್ರೆಗೆ ಹೋದರೆ ರೂಪಾಯಿ ಹತ್ತು ಸಾವಿರದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತದೆ. ಅಗತ್ಯವಿದ್ದರೆ ನಾನೇ ವೈದ್ಯರ ಬಳಿ ಮಾತನಾಡುತ್ತೇನೆ” ಎಂದರು.

ಸಭಾ ಅಧ್ಯಕ್ಷತೆ ವಹಿಸಿದ್ದ ಹೊನ್ನಾವರ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದ ನಾಯ್ಕ್ ಮಾತನಾಡಿ “ನಾನೂ ರೈತ ಕುಟುಂಬದವನಾಗಿದ್ದು, ರೈತರ ನೋವು ನಲಿವುಗಳ ಅರಿವು ನನಗಿದೆ. ರೈತರು ನಮ್ಮ ಪಿ.ಎಲ್.ಡಿ ಬ್ಯಾಂಕ್ ನಲ್ಲಿ ವ್ಯವಹರಿಸಬೇಕು. ರೈತರಿಗೆ ಅನುಕೂಲಕರವಾಗಿ ಸೇವೆ ಒದಗಿಸುತ್ತೇವೆ” ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸಚಿನ್ ನಾಯ್ಕ್, ಎಚ್.ಆರ್.ಗಣೇಶ್, ಹೊನ್ನಾವರ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಜೇಶ್ ನಾಯ್ಕ್, ಶಿಕ್ಷಕಿ ಸುಮಿತ್ರಾ ದೇಶಭಂಡಾರಿ, ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ್ ನಾಯ್ಕ ಉಪಸ್ಥಿತರಿದ್ದರು. ಬಳಿಕ ನಡೆದ ಗ್ರಾಮೀಣ ಕ್ರೀಡಾಕೂಟದಲ್ಲಿ ಗಡಿಗೆ ಒಡೆತ, ಸಂಗೀತ ಕುರ್ಚಿ, ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳು ಕ್ರೀಡಾಭಿಮಾನಿಗಳನ್ನು ರಂಜಿಸಿತು. ಶಾಲಾ ಮಕ್ಕಳ ನೃತ್ಯ ಸ್ಪರ್ಧೆ ನಡೆಯಿತು.