ಪತಿಯ ಅಕ್ರಮ ಸಂಬಂಧ ವಿಚಾರಿಸಿದ ಪತ್ನಿ ಮೇಲೆ ರಾಕ್ಷಸ ಕೃತ್ಯ; ತಾಯಿ-ಮಗಳನ್ನು ಅಟ್ಟಾಡಿಸಿ ಹಿಂಸೆ ತೋರಿದ ಕ್ರೌರ್ಯ

ಬೆಳಗಾವಿ, ಅಕ್ಟೋಬರ್ 24: ಪತ್ನಿ ಎಂಬ ಬಾಂಧವ್ಯವನ್ನೂ, ಮಹಿಳೆಯೆಂಬ ಮಾನವೀಯತೆಯ ಕನಿಷ್ಠ ಸೌಜನ್ಯವನ್ನೂ ಮರೆತು, ಸಾರ್ವಜನಿಕವಾಗಿ ಹಲ್ಲೆ ನಡೆಸಿದ ದುಷ್ಕೃತ್ಯ ಬೆಳಕಿಗೆ ಬಂದಿದೆ. ಮಗಳ ರಕ್ಷಣೆಗೆ ಬಂದ ತಾಯಿ ಮೇಲೆಯೂ ಕ್ರೌರ್ಯ ತೋರಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಂಬಲವಾಡ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ರಾಜಶ್ರೀ ಹೊಸಮನಿ ಅವರು ಐದು ವರ್ಷಗಳ ಹಿಂದೆ ರಾಕೇಶ್ ಹೊಸಮನಿ ಎಂಬಾತನನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಮಗಳು ಇದ್ದಾಳೆ. ರಾಕೇಶ್ ಮದುವೆಗೂ ಮುನ್ನ ಬೇರೊಬ್ಬ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂಬುದು ಮದುವೆಯಾದ ಕೆಲವೇ ದಿನಗಳಲ್ಲಿ ಬಯಲಾಗಿದೆ. ಮದುವೆಯಾದ ಬಳಿಕವೂ ಆ ಸಂಬಂಧ ಮುಂದುವರಿದ ಕಾರಣ ರಾಜಶ್ರೀ ಗಂಡನೊಂದಿಗೆ ವಾದವಿವಾದ ನಡೆಸಿ ಎಚ್ಚರಿಸಿದ್ದರು. ಬಳಿಕ ಹಿರಿಯರ ಮಧ್ಯಸ್ಥಿಕೆಯಿಂದ ಇಬ್ಬರೂ ಪುನಃ ಒಂದಾಗಿದ್ದರೂ, ಗಂಡನ ವರ್ತನೆ ಬದಲಾಗಲಿಲ್ಲವೆಂದು ರಾಜಶ್ರೀ ಆರೋಪಿಸಿದ್ದರು.

ವರದಕ್ಷಿಣೆ ಕಿರುಕುಳದ ವಿಷಯಕ್ಕೂ ಆಕೆ ತವರು ಮನೆ ಸೇರಿದ್ದರು. ಇತ್ತೀಚೆಗೆ ದೀಪಾವಳಿ ಹಬ್ಬದ ನೆಪದಲ್ಲಿ ಅತ್ತೆ-ಮಾವರು ಮನೆಗೆ ಬರುವಂತೆ ಕರೆ ನೀಡಿದ್ದರು. ಮನೆಗೆ ಬಂದ ಬಳಿಕ ಗಂಡನ ಅಕ್ರಮ ಸಂಬಂಧದ ಕುರಿತು ಮತ್ತೆ ವಾಗ್ವಾದ ಉಂಟಾಗಿ, ಗಂಡ ಹಾಗೂ ಅವನ ಸಹೋದರ ಸೇರಿಕೊಂಡು ರಾಜಶ್ರೀ ಮೇಲೆ ಹಲ್ಲೆ ನಡೆಸಿದ್ದಾರೆ. ರಾಜಶ್ರೀಯನ್ನು ಬಿಡಿಸಲು ಬಂದ ತಾಯಿ ಮೇಲೆಯೂ ಹಲ್ಲೆ ಮಾಡಿ ಅಟ್ಟಾಡಿಸಿದ್ದಾರೆ.

ಗ್ರಾಮದ ಮಧ್ಯದಲ್ಲೇ ನಡೆದ ಈ ಘಟನೆ ವೇಳೆ ಹಲವರು ಮೂಕಪ್ರೇಕ್ಷಕರಾಗಿ ನಿಂತಿದ್ದರು. ಮಹಿಳೆಯರಿಬ್ಬರ ಮೇಲೂ ಕ್ರೂರ ಹಲ್ಲೆ ನಡೆದರೂ ಯಾರೂ ಸಹಾಯಕ್ಕೆ ಬಂದಿಲ್ಲ. ಕಾಲಿನಿಂದ ಒದ್ದು, ಮುಖ ಸೇರಿದಂತೆ ದೇಹದ ಹಲವೆಡೆ ಹೊಡೆದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಬೆಚ್ಚಿಬಿದ್ದ ರಾಜಶ್ರೀ ಹಾಗೂ ಕುಟುಂಬಸ್ಥರು ಹಲ್ಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇತ್ತ ಗಂಡ ರಾಕೇಶ್, “ಗುಂಪು ಕಟ್ಟಿಕೊಂಡು ಬಂದು ಕಲ್ಲು ತೂರಾಟ ಮಾಡಿದ್ದಾರೆ” ಎಂದು ಪ್ರತಿಯಾರೋಪ ಮಾಡಿದ್ದಾರೆ. ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹಲ್ಲೆಗಾರರು ಪೊಲೀಸರ ಬರುವ ಮುನ್ನವೇ ಪರಾರಿಯಾಗಿದ್ದಾರೆ.