ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕದ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಡಿಸೆಂಬರ್ 9 ರಿಂದ 19ರ ತನಕ ಅಧಿವೇಶನ ನಡೆಯಲಿದ್ದು, ಬೆಳಗಾವಿ ಜಿಲ್ಲಾಡಳಿತ ಅಧಿವೇಶನಕ್ಕೆ ಸಕಲ ರೀತಿಯಲ್ಲಿ ತಯಾರಿಯನ್ನು ನಡೆಸುತ್ತಿದೆ. ರಾಜ್ಯದ ಇಡೀ ಆಡಳಿತ ಯಂತ್ರವೇ ಬೆಳಗಾವಿಯಲ್ಲಿರಲಿದ್ದು, ಯಾವುದೇ ಲೋಪಗಳು ಆಗದಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ವಿಪಕ್ಷಗಳ ಬಳಿ ಇದೆ ಪ್ರಬಲ ಅಸ್ತ್ರ
ಈ ಬಾರಿಯ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷಗಳಿಗೆ ಪ್ರಬಲ ಅಸ್ತ್ರಗಳು ಸಿಕ್ಕಿವೆ. ಸಿಎಂ ಸಿದ್ದರಾಮಯ್ಯ ಮೇಲೆ ಕೇಳಿ ಬಂದಿರುವ ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಪ್ರಸ್ತಾಪ ಮಾಡಿದ ಅಂಶಗಳು, ವಕ್ಪ್ ವಿವಾದ, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ, ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ನಿಯಮ ಸಡಿಲಿಕೆ ವಿಚಾರ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ವಿವಾದ, ಗ್ಯಾರಂಟಿ ಯೋಜನೆಯಲ್ಲಿ ಲೋಪ.. ಹೀಗೆ ಸರ್ಕಾರದ ವಿರುದ್ದ ಸಾಲು ಸಾಲು ಅಸ್ತ್ರ ಪ್ರಯೋಗ ಮಾಡುವ ಮೂಲಕ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಿದ್ದವಾಗಿವೆ.
ನಾಳೆಯಿಂದ ಅಂದರೆ ಡಿಸೆಂಬರ್ 09ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಬಿಸಿ ಏರಲಿದೆ. ಬಿಜೆಪಿ ಅಸ್ತ್ರಗಳಿಗೆ ಕೊರೊನಾಸ್ತ್ರ ರೆಡಿ ಮಾಡಿರೋ ಕಾಂಗ್ರೆಸ್, ಜೊತೆಗೆ ಯತ್ನಾಳ್ ಬಣ ಬಡಿದಾಟವನ್ನ ತಿರುಗುಬಾಣವಾಗಿ ಬಿಡಲು ಸಜ್ಜಾಗಿದೆ. ಬಿಜೆಪಿ ವಕ್ಫ್ ವಿಚಾರ ಮುಂದಿಟ್ರೆ, ಯತ್ನಾಳ್ ಪ್ರತ್ಯೇಕ ಹೋರಾಟವನ್ನೇ ಪ್ರಸ್ತಾಪಿಸಿ ತಿವಿಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ. ಹೀಗಾಗಿ, ಎಚ್ಚರಿಕೆ ಹೆಜ್ಜೆ ಇಟ್ಟಿರುವ ಬಿಜೆಪಿ, ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದೆ.
ಯತ್ನಾಳ್ ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ಲ್ಯಾನ್
ವಕ್ಫ್ ಹೋರಾಟದಲ್ಲಿ ವ್ಯತ್ಯಾಸವಾಗದಂತೆ ಪ್ಲ್ಯಾನ್ ರೂಪಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ನಿಲುವಳಿ ರೂಪದಲ್ಲಿ ವಿಷಯ ಪ್ರಸ್ತಾಪಿಸಲಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ಚರ್ಚೆ ಮುಂದುವರೆಸಲಿದ್ದಾರೆ. ಹೀಗಂತ ಪ್ಲ್ಯಾನ್ ಮಾಡಿಕೊಂಡು ಯತ್ನಾಳ್‌ರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಅಶೋಕ್ ಮುಂದಾಗಿದ್ದಾರೆ. ಯತ್ನಾಳ್ ತಂಡದ ಪ್ರತ್ಯೇಕ ಚಟುವಟಿಕೆಯಿಂದ ಮುಜುಗರ ಸಾಧ್ಯತೆ ಹಿನ್ನೆಲೆಯಲ್ಲಿ ಬಹಿರಂಗ ಹೋರಾಟ ಬಿಟ್ಟು ಸದನದೊಳಗೆ ಒಗ್ಗಟ್ಟಾಗಿ ಹೋರಾಡಲು ತಂತ್ರ ರೂಪಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಇಷ್ಟು ದಿನ ಯತ್ನಾಳ್ ಮೇಲೆ ಬೆಂಕಿಯುಗುಳ್ತಿದ್ದ ಯತ್ನಾಳ್, ಈಗ ಸಾಫ್ಟ್ ಆದಂತೆ ಕಾಣಿಸುತ್ತಿದೆ.
ನಿನ್ನೆ(ಡಿಸೆಂಬರ್ 07) ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್, ಬಹಿರಂಗವಾಗಿ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಅತ್ತ ಯತ್ನಾಳ್‌ಗೂ ಶಿಸ್ತು ಸಮಿತಿ ಸಭೆಯಲ್ಲಿ ಇದೇ ಸೂಚನೆಯನ್ನ ನೀಡಲಾಗಿದೆ. ಹೀಗಾಗಿ ಯತ್ನಾಳ್ ಕೂಡಾ ಬಹಿರಂಗವಾಗಿ ಹೆಚ್ಚು ಮಾತನಾಡುತ್ತಿಲ್ಲ. ವಿಜಯೇಂದ್ರ ವಿರುದ್ಧ ಕಿಡಿಕಾರುತ್ತಿಲ್ಲ. ಬದಲಾಗಿ ತಮ್ಮ ವಾಗ್ದಾಳಿಯನ್ನ ಸರ್ಕಾರದ ಕಡೆ ತಿರುಗಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಯತ್ನಾಳ್ ಸಿಡಿಗುಂಡಿಗೆ ತಿರುಗೇಟು ಕೊಟ್ಟಿರೋ ಸಚಿವ ಚಲುವರಾಯಸ್ವಾಮಿ, ಶಾಸಕ ಯತ್ನಾಳ್ ಒಂದ್ಕಡೆ ಪಕ್ಷದ ವಿರುದ್ಧ ಹೋರಾಟ ಮಾಡ್ತಿದ್ರೆ, ಮತ್ತೊಂದ್ಕಡೆ ಸರ್ಕಾರದ ವಿರುದ್ಧ ಮಾತನಾಡ್ತಾರೆ. ಅವರಿಗೆ ಪುರುಸೋತ್ತಿಲ್ಲ ಎಂದು ಕಾಲೆಳೆದಿದ್ದಾರೆ. ಆದ್ರೆ, ಬಿಜೆಪಿ ನಾಯಕರೇನೋ ಯತ್ನಾಳ್ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಡಲು ಮುಂದಾಗಿದ್ದಾರೆ. ಆದ್ರೆ, ಯತ್ನಾಳ್ ನಿಜಕ್ಕೂ ಸದನದಲ್ಲಿ ಬಿಜೆಪಿ ನಾಯಕರ ಜೊತೆಗೂಡಿ ವಕ್ಫ್ ವಿರುದ್ಧ ಹೋರಾಡುತ್ತಾರಾ? ವಿಪಕ್ಷ ಅಶೋಕ್ ಪ್ಲ್ಯಾನ್‌ಗೆ ಕೈ ಜೋಡಿಸುತ್ತಾರಾ? ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.