ಭಾರತದಲ್ಲೇ ದೇಶೀಯವಾಗಿ ರೂಪಿತವಾದ ಪಾವತಿ ವಿಧಾನವಾದ ಯುಪಿಐ ನಿರೀಕ್ಷೆಮೀರಿದ ಯಶಸ್ಸು ಪಡೆದಿದೆ. ದೇಶದ ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ಇದು ಭರ್ಜರಿ ಪುಷ್ಟಿ ಕೊಟ್ಟಿರುವುದು ಹೌದು. ಯುಪಿಐನ ಈ ಯಶಸ್ಸು ಈಗ ಅದರ ಮೇಲೆ ಜಾಗತಿಕವಾಗಿ ಚಿತ್ತ ನೆಡುವಂತೆ ಮಾಡಿದೆ. ಹಲವು ದೇಶಗಳು ಯುಪಿಐ ಬಗ್ಗೆ ಆಸಕ್ತವಾಗಿವೆ. ತಜ್ಞರು ಸೇರಿ ಬರೆದಿರುವ ಸಂಶೋಧನಾ ವರದಿ ಪ್ರಕಾರ, ಇತರ ದೇಶಗಳಲ್ಲೂ ಯಪಿಐ ರೀತಿಯ ಪಾವತಿ ಸಿಸ್ಟಂ ಅನ್ನು ಜಾರಿಗೆ ತರಬಹುದು.
ಶಾಶ್ವತ್ ಅಲೋಕ್, ಪುಳಕ್ ಘೋಷ್, ನಿರುಪಮಾ ಕುಲಕರ್ಣಿ, ಮಂಜು ಪುರಿ ಅವರು ರಚಿಸಿರುವ 67 ಪುಟಗಳ ವರದಿಯಲ್ಲಿ, ಯುಪಿಐನ ಪರಿಣಾಮಗಳನ್ನು ಚಿತ್ರಿಸಲಾಗಿದೆ. ಬೇರೆ ದೇಶಗಳಿಗೆ ಇದು ಹೇಗೆ ಮಾದರಿಯಾಗಬಲ್ಲುದು ಎಂಬುದನ್ನು ಎತ್ತಿ ತೋರಿಸಲಾಗಿದೆ. ಮುಕ್ತ ಬ್ಯಾಂಕಿಂಗ್ ನೀತಿಯೊಂದಿಗೆ ಸಾರ್ವಜನಿ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಅನ್ನು ಜೋಡಿಸುವ ಕೆಲಸವನ್ನು ಯುಪಿಐ ಮಾಡಿದೆ. ಇದರಿಂದ ಆರ್ಥಿಕ ಒಳಗೊಳ್ಳುವಿಕೆ, ನಾವೀನ್ಯತೆ ಮತ್ತು ಸಮಾನ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಇದರಿಂದ ಸಾಧ್ಯವಾಗಿದೆ ಎಂಬುದು ಈ ತಜ್ಞರ ಅನಿಸಿಕೆ.
2016ರಲ್ಲಿ ಯುಪಿಐ ಪೇಮೆಂಟ್ ಸಿಸ್ಟಂ ಅನ್ನು ಜಾರಿಗೆ ತರಲಾಗಿದೆ. 30 ಕೋಟಿ ಜನರು ಇದನ್ನು ಬಳಸುತ್ತಿದ್ದಾರೆ. 5 ಕೋಟಿ ವರ್ತಕರಿಗೆ ಇದು ವರದಾನವಾಗಿದೆ. 2023ರ ಅಕ್ಟೋಬರ್ ತಿಂಗಳ ದತ್ತಾಂಶದ ಪ್ರಕಾರ ಶೇ. 75ರಷ್ಟು ರೀಟೇಲ್ ಡಿಜಿಟಲ್ ಪಾವತಿಯು ಯುಪಿಐ ಮೂಲಕ ಆಗಿದೆ.
‘ಕೆಲವೇ ಕಾಲಘಟ್ಟದಲ್ಲಿ ಭಾರತದಾದ್ಯಂತ ಡಿಜಿಟಲ್ ಪಾವತಿಗಳು ಸಾಕಷ್ಟು ಹೆಚ್ಚಲು ಯುಪಿಐ ಪ್ರಮುಖ ಕಾರಣವಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಎಲ್ಲಾ ಮಟ್ಟಗಳಲ್ಲೂ ಯುಪಿಐ ಪಾವತಿಯನ್ನು ಬಳಸಲಾಗುತ್ತಿದೆ,’ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಯುಪಿಐ ಬಳಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೊಸ ಸಾಲಗಾರರ ಸಂಖ್ಯೆ ಶೇ. 4ರಷ್ಟು ಹೆಚ್ಚಿದೆ. ಸಾಲ ಪಡೆಯಲು ಕಷ್ಟವಾಗಿರುವಂತಹ ಸಾಲಗಾರರ ಪ್ರಮಾಣ ಶೇ. 8ರಷ್ಟು ಹೆಚ್ಚಿದೆ. ಫಿನ್ಟಕ್ ಸಂಸ್ಥೆಗಳು ನೀಡುವ ಸರಾಸರಿ ಸಾಲದ ಗಾತ್ರ 27,778 ರೂ ಇದೆ. ಇದು ಗ್ರಾಮೀಣ ಭಾಗದ ಮಾಸಿಕ ವೆಚ್ಚದ ಏಳು ಪಟ್ಟು ಹಣ. ಈ ಕುತೂಹಲಕಾರಿ ಅಂಶವನ್ನು ತಜ್ಞರ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.