ಹೊನ್ನಾವರ: ಕಾಸರಕೋಡ್ ಟೋಂಕ್ ಕಡಲತೀರದಲ್ಲಿ ರಸ್ತೆ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ಸಮನ್ಸ್ ಜಾರಿಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡದ ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ದೌರ್ಜನ್ಯದ ಕುರಿತು ದಾಖಲಾದ ದೂರಿನನ್ವಯ ಸಮನ್ಸ್ ಜಾರಿಯಾಗಿದೆ.
ತಾಲೂಕಿನ ಕಾಸರಕೋಡ್ ನಲ್ಲಿ ಹೊನ್ನಾವರ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ವಾಣಿಜ್ಯ ಬಂದರು ಉದ್ದೇಶಕ್ಕಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೀನುಗಾರರು ಮಾನವ ಹಕ್ಕು ಆಯೋಗ ಮೊರೆ ಹೋಗಿದ್ದರು.
ಆ ರಸ್ತೆಯು ಮೀನುಗಾರ ಸಮುದಾಯಗಳ ಜೀವನೋಪಾಯ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂಬ ಕಾರಣಕ್ಕಾಗಿ ಪ್ರತಿಭಟನೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅವುಗಳ ಸ್ಥಳಾಂತರ, ಪರಿಸರ ನಾಶಕ್ಕೆ ಕಾರಣವಾಗುತ್ತದೆ ಮತ್ತು ಕಾಸರಕೋಡು ಟೋಂಕ್‌ನ ಕಡಲತೀರಗಳಲ್ಲಿ ಗೂಡುಕಟ್ಟುವ ಆಲಿವ್ ರಿಡ್ಲೆ ಆಮೆಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಕರ್ತವ್ಯಲೋಪ ಎಸಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಮತ್ತು ಮೀನುಗಾರ ಸಮುದಾಯದ ಕಾಳಜಿಯ ದೃಷ್ಟಿಯಿಂದ ತರ್ಕಬದ್ಧ ನಿರ್ಧಾರಕ್ಕಾಗಿ ಆಯೋಗದ ಮಧ್ಯಸ್ಥಿಕೆಯನ್ನು ಕೋರಲಾಗಿತ್ತು.
ಜಿಲ್ಲಾ/ರಾಜ್ಯ ಆಡಳಿತ ಅಧಿಕಾರಿಗಳು ಮೇ 9: 2022 ರಂದು ಗಮನಕ್ಕೆ ತಂದ ಆಯೋಗವು ನಾಲ್ಕು ವಾರಗಳಲ್ಲಿ ಕ್ರಮ ತೆಗೆದುಕೊಂಡು ವರದಿಯನ್ನು ಸಲ್ಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಕನ್ನಡ ಮತ್ತು ಜಿಲ್ಲಾಧಿಕಾರಿಯವರಿಗೆ ಸೂಚಿಸಿತು. ಜುಲೈ 19,2022 ರ ನಿರ್ದೇಶನ ಮತ್ತು ಜ್ಞಾಪನೆ ಹೊರತಾಗಿಯೂ, ಈ ಅಧಿಕಾರಿಗಳು ಇಲ್ಲಿಯವರೆಗೆ ಅಗತ್ಯವಾದ ವರದಿಯನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಆಯೋಗವು ಗಮನಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಅ.28,2022 ರಂದು ಆಯೋಗದ ಮುಂದೆ ಹಾಜರಾಗಲು ಸಮನ್ಸ್ ನಲ್ಲಿ ತಿಳಿಸಿದೆ.
ಹಿನ್ನಲೆ: ಕಾಸರಕೋಡ ಖಾಸಗಿ ಬಂದರು ಕಾಮಗಾರಿ ಸ್ಥಗಿತ ಗೊಳಿಸುವಂತೆ ಹಾಗೂ ಬಂದರಿಗೆ ರಸ್ತೆ ಕಾಮಗಾರಿ ಸ್ಥಗಿತ ಗೊಳಿಸುವಂತೆ ಆಗ್ರಹಿಸಿ ದಿನಾಂಕ 24/1/22 ರಂದು ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪ್ರತಿಭಟನಾನಿರತ ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರನ್ನು ಎಫ್ .ಐ.ಆರ್ ಸಹ ದಾಖಲಿಸದೇ ಬಂಧಿಸಿ ಸಂಜೆವೇಳೆ ಬಿಡುಗಡೆ ಗೊಳಿಸಲಾಗಿತ್ತು. ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿ ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ 6/05/22 ದೂರು ದಾಖಲಿಸಿದ್ದರು.