ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದ ಅಕ್ರಮದ ಬಗ್ಗೆ ಎಸ್‌ಪಿ ಹೇಳಿದ್ದೇನು.?!

ಕಾರವಾರ: ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿನ ಉನ್ನತ ಮಟ್ಟದ ಅಧಿಕಾರಿಯು ಅಕ್ರಮವಾಗಿ 2.70 ಕೋಟಿ ರೂ. ಜಮಾ ಮಾಡಿದ್ದ ಆತನ ಪತ್ನಿಯ ಖಾತೆಯಲ್ಲಿ ಈಗ ಯಾವುದೇ ಹಣವಿಲ್ಲದಿರುವುದು ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ ಹೇಳಿದರು.

ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾತನಾಡಿದ ಅವರು ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕುಮಾರ ಬೋನಲ್ ಈತನು ಬೇರೆ ಸಿಬ್ಬಂದಿಗಳ ಐಡಿಯಿಂದ ಲಾಗಿನ್ ಆಗಿ ಹಂತ ಹಂತವಾಗಿ ಕಳೆದ 4-5 ತಿಂಗಳಿಂದ ತನ್ನ ಕುಟುಂಬಸ್ಥರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ. ಇಲ್ಲಿಯವರೆಗೆ ಬ್ಯಾಂಕ್ ನಿಂದ 2.70 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಂಡಿರುವುದು ತಿಳಿದು ಬಂದಿದೆ. ಈ ವಿಷಯವು ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಗಳಿಗೆ ಇತ್ತೀಚೆಗೆ ಗಮನಕ್ಕೆ ಬಂದಿದ್ದರಿಂದ ಅವರು ಈ ಬಗ್ಗೆ ದೂರು ನೀಡಿದ್ದಾರೆ.

ಅವರ ಮಾಹಿತಿ ಹಾಗೂ ದಾಖಲೆಗಳನ್ನು ಆಧರಿಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅವರು ತಮ್ಮ ಪತ್ನಿಯ ಖಾತೆಗೆ ಜಮಾ ಮಾಡಿರುವುದರಿಂದ ಅವರನ್ನೂ ಈ ಪ್ರಕರಣದ ಆರೋಪಿಯನ್ನಾಗಿ ಮಾಡಲಾಗಿದೆ. ಇನ್ನು ಅವರ ಖಾತೆಯಿಂದ ಹಣವನ್ನು ಮರು ಭರ್ತಿ ಮಾಡಿಕೊಳ್ಳಲು ಈಗ ಅವರ ಖಾತೆಯಲ್ಲಿ ಯಾವುದೇ ಹಣವಿಲ್ಲ ಎಂಬುದು ಪತ್ತೆಯಾಗಿದೆ.

ಇದರ ಜೊತೆಗೆ ಈ ಬ್ಯಾಂಕ್ ಸಹಾಯಕ ಕಳೆದೊಂದು ವಾರದ ಹಿಂದೆಯೇ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಆ ಸಂದರ್ಭದಲ್ಲಿ ಬ್ಯಾಂಕ್ ವಿಷಯ ಯಾರ ಗಮನಕ್ಕೂ ಬಂದಿರಲಿಲ್ಲ. ಅವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಆರೋಪಿ ಪತ್ತೆಯಾದ ಬಳಿಕ ಹಣವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.