ಕಾರವಾರ: ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ ಮಂಗಳೂರು ಜಂಟಿ ಅಬಕಾರಿ ಆಯುಕ್ತರ ಕಚೇರಿ ಅಧಿಕಾರಿಗಳು ಹಾಗೂ ಕಾರವಾರ ವಿಭಾಗದ ಅಧಿಕಾರಿಗಳು ಗೋವಾ ನೋಂದಣಿಯ ಸ್ವಿಫ್ಟ್ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ.
ಕಾರಿನಲ್ಲಿ 33.84 ಲೀ. ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ. ಮದ್ಯ ಹಾಗೂ ಕಾರು ಸೇರಿ ಒಟ್ಟೂ 3,12,040 ರೂ. ಮೌಲ್ಯದ ಸ್ವತ್ತು ಹಾಗೂ ಆರೋಪಿಗಳಾದ ಉಳಗಾದ ಕಾಶಿನಾಥ ಜಾಧವ ಹಾಗೂ ರಾಜನ ಪಾಟೀಲ ಎನ್ನುವವರನ್ನು ಬಂಧಿಸಲಾಗಿದ್ದು ಕಾರು ಮಾಲೀಕನನ್ನು ಪತ್ತೆಹಚ್ಚಬೇಕಿದೆ ಎಂದು ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ತಿಳಿಸಿದ್ದಾರೆ.
ಈ ಬಗ್ಗೆ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು ಕಾರ್ಯಾಚರಣೆಯಲ್ಲಿ ಅಬಕಾರಿ ಅಧಿಕಾರಿಗಳಾದ ಪಿ. ಕೆ. ಹಳದನಕರ, ಉಷಾ ಯಂಡಿಗೇರಿ, ಬಸವರಾಜ, ದಯಾನಂದ, ಶ್ರೀಧರ ಚೌಗುಲೆ, ಎಂ. ಕೆ. ನಾಯ್ಕ ಪಾಲ್ಗೊಂಡಿದ್ದರು.