ಕಾರವಾರ: ನಗರದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕಾಶದತ್ತ ನೋಡಿದವರಿಗೆ ಅಚ್ಚರಿ ದೃಶ್ಯ ಕಂಡು ಬಂತು. ಸೂರ್ಯನ ಸುತ್ತಲೂ ಕಾಮನ ಬಿಲ್ಲಿನಂತೆ ಬಣ್ಣ ಬಣ್ಣದ ಉಂಗುರ ರಚನೆಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಇದೊಂದು ಆಗಸದಲ್ಲಿ ನಡೆಯುವ ವಿಶೇಷ ಪ್ರಕ್ರಿಯೆಯಾಗಿದ್ದು ಸೋಮವಾರ ಅಪರೂಪದ ದರ್ಶನ ನೀಡಿತ್ತು.
ಏನಿದು ಅಚ್ಚರಿಯ ವಿದ್ಯಮಾನ.?
ಇನ್ನು ಈ ಬಗ್ಗೆ ತಜ್ಞರನ್ನು ವಿಚಾರಿಸಿದಾಗ ವಿವರಿಸಿದ ಅವರು ಮಂಜುಗಡ್ಡೆ (ಮೋಡ) ಮೂಲಕ ಬೆಳಕು ಹಾದು ಹೋದಾಗ ಉಂಟಾಗುವ ಈ ಸಾಮಾನ್ಯ ವಿದ್ಯಮಾನಕ್ಕೆ 22 ಡಿಗ್ರಿ ‘ಹ್ಯಾಲೋ’ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಮೋಡಗಳು ಚಲಿಸುತ್ತ ಸೂರ್ಯನ ಸುತ್ತ ಬಂದಾಗ ಈ ರೀತಿ ಕಾಣಿಸುತ್ತದೆ. ಇದಕ್ಕೆ ವಾತಾವರಣವೇ ಕಾರಣವಾಗಿದ್ದು ಘನೀಕೃತ ನೀರಿನ ಮೂಲಕ ಬೆಳಕು ಹಾದುಹೋದಾಗ ಬೆಳಕಿನ ವಿಭಜನೆಯಾಗುತ್ತದೆ. ಆಗ ಕಾಮನಬಿಲ್ಲಿನ ರೀತಿಯಲ್ಲೇ ಸೂರ್ಯನ ಸುತ್ತ ರಚನೆಯೊಂದು ಗೋಚರಿಸುತ್ತದೆ ಎಂದು ಮಾಹಿತಿ ನೀಡಿದರು.
ಅಂತೂ ಕಾರವಾರದಲ್ಲಿ ಇಂದು ಕಂಡ ಈ ವಿದ್ಯಮಾನ ಸಾರ್ವಜನಿಕರ ಗಮನ ಸೆಳೆಯಿತು. ಬಹುತೇಕರು ವಿವಿಧ ರೀತಿಯಲ್ಲಿ ಫೊಟೋ ಕ್ಲಿಕ್ ಮಾಡಿ ಶೇರ್ ಮಾಡಿಕೊಂಡರು. ಸ್ನೇಹಿತರಿಗೆ, ಸಂಬಂಧಿಕರಿಗೆ ತಿಳಿಸಿ ಆಗಸ ನೋಡುವಂತೆ ಹೇಳುತ್ತಿರುವುದು ಕಂಡು ಬಂತು.