ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಈಗಾಗಲೇ ಸುರಿದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜಲಾಶಯಗಳು ಭರ್ತಿಯಾಗುವ ಮಟ್ಟ ತಲುಪಿದ್ದು ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರನ್ನು ಆಣೆಕಟ್ಟುಗಳಿಂದ ಹೊರಬಿಡುವ ಸಾಧ್ಯತೆ ಇದೆ ಎಂದು ಕೆಪಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ 2019 ಹಾಗೂ 2021ರಲ್ಲಿ ಜಿಲ್ಲೆಯಲ್ಲಿ ಉಂಟಾದ ಭಾರೀ ಪ್ರವಾಹವು ಈ ಬಾರಿಯೂ ಮರುಕಳಿಸಲಿದೆಯೇ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
5 ದಿನ ಭಾರೀ ಮಳೆ.?
ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಜು.14 ರಿಂದ ಜು.18 ರವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಜೊತೆಗೆ ಸಮುದ್ರದಲ್ಲಿ 45-60 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು ಈ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರದತ್ತ ತೆರಳದಂತೆ ಸೂಚನೆ ನೀಡಿದೆ.
ಜಲಾಶಯಗಳು ಭರ್ತಿಯತ್ತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಿನದಿಗೆ ಐದು ಹಾಗೂ ಶರಾವತಿ ನದಿಗೆ ಒಂದು ಸೇರಿ ಒಟ್ಟೂ ಆರು ಜಲಾಶಯಗಳಿದ್ದು ಇವುಗಳಲ್ಲಿ ಸೂಪಾ ಅತ್ಯಂತ ಎತ್ತರದ ಜಲಾಶಯವಾಗಿದೆ. ಇದರ ಗರಿಷ್ಠ ಮಟ್ಟ 564 ಮೀ. ಆಗಿದ್ದು ಸದ್ಯ 534.60 ಮೀ. ಗೆ ತಲುಪಿದೆ. ಹೀಗಾಗಿ ಈ ಜಲಾಶಯದಲ್ಲಿ ಗರಿಷ್ಠ ಮಟ್ಟ ತಲುಪಲು ಇನ್ನೂ 30 ಮೀ. ಮಾತ್ರ ಬಾಕಿ ಇದೆ.
ಬೊಮ್ಮನಹಳ್ಳಿ ಜಲಾಶಯದ ಗರಿಷ್ಠ ಮಟ್ಟ 438.38 ಮೀ. ಆಗಿದ್ದು ಈಗಾಗಲೇ 436.50 ಮೀ. ತಲುಪಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 3000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಇನ್ನೂ ಹೆಚ್ಚಿನ ಮಳೆಯಾದರೆ ಒಳ ಹರಿವು ಹೆಚ್ಚಾಗಲಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುವ ಸಾಧ್ಯತೆ ಇದೆ. ಆದ್ದರಿಂದ, ಬೊಮ್ಮನಹಳ್ಳಿ ಜಲಾಶಯದ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುವ ಜನರು ತಮ್ಮ ಆಸ್ತಿ ಪಾಸ್ತಿ, ಜಾನುವಾರು ಹಾಗೂ ಪ್ರಾಣಹಾನಿಯ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದೆ. ಮುಂಜಾಗೃತೆಯಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಜಲಾಶಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜಲಾಶಯದ ಕೆಳ ಭಾಗದ ನದಿ ಪಾತ್ರದಲ್ಲಿ ಮೀನುಗಾರಿಕೆ, ದೋಣಿ ಸಂಚಾರ ಮತ್ತು ಇತರ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಸಲಾಗಿದೆ.
ಕೊಡಸಳ್ಳಿ ಹಾಗೂ ಕದ್ರಾ ಜಲಾಶಯಗಳೂ ಭರ್ತಿ
ಕೊಡಸಳ್ಳಿ ಆಣೆಕಟ್ಟೆಯ ಹಿನ್ನೀರು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚಿದೆ. ಈ ಆಣೆಕಟ್ಟೆಯ ಗರಿಷ್ಟ ಮಟ್ಟ 75.50 ಮೀ. ಆಗಿದ್ದು ಸದ್ಯ 70.73 ಮೀ. ತಲುಪಿದೆ. ಇದೀಗ ಬೊಮ್ಮನಹಳ್ಳಿ ಜಲಾಶಯದಿಂದ ಹೊರಬಂದ ನೀರು ಈ ಜಲಾಶಯಕ್ಕೆ ಸೇರುವುದರಿಂದ ಗರಿಷ್ಟಮಟ್ಟ ಹೆಚ್ಚಲಿದೆ. ಹೀಗಾಗಿ ಈ ಜಲಾಶಯದಿಂದಲೂ ಹೆಚ್ಚುವರಿ ನೀರನ್ನು ಹೊರಬಿಡುವುದು ಅನಿವಾರ್ಯವಾಗಿರುತ್ತದೆ. ಇನ್ನು ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀ. ಆಗಿದ್ದು ಸದ್ಯ 30.48 ಮೀ. ಇದೆ. ಒಳಹರಿವು 27629 ಕ್ಯೂಸೆಕ್ ಇದ್ದು ಹೊರ ಹರಿವು 24980 ಕ್ಯೂಸೆಕ್ ಇದೆ. ಇನ್ನು ಬೊಮ್ಮನಹಳ್ಳಿ ಹಾಗೂ ಕೊಡಸಳ್ಳಿ ಜಲಾಶಯಗಳಿಂದ ಬಿಡಲಾದ ಹೆಚ್ಚುವರಿ ನೀರು ಕದ್ರಾ ಆಣೆಕಟ್ಟೆಗೆ ತಲುಪುವುದರಿಂದ ಇಲ್ಲಿಂದಲೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುವುದು ಅನಿವಾರ್ಯವಾಗಿರುತ್ತದೆ.
ಪ್ರವಾಹದ ಆತಂಕದಲ್ಲಿ ಜನರು
ಕಳೆದ 2019 ಹಾಗೂ 2021 ರಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ಈ ಎಲ್ಲ ಆಣೆಕಟ್ಟುಗಳಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟ ಪರಿಣಾಮ ಕಾರವಾರದ ಹಲವಾರು ಪ್ರದೇಶಗಳು ಜಲವೃತಗೊಂಡಿದ್ದವು. ಕಾಳಿ ನದಿ ತೀರದ ಸಾವಿರಾರು ಮನೆಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿತ್ತು. ಸಾವಿರಾರು ಮಂದಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಈಗ ಮತ್ತೆ ನೀಡಲಾಗಿರುವ ಭಾರೀ ಮಳೆಯ ಮುನ್ಸೂಚನೆ ಎಲ್ಲರನ್ನು ಆತಂಕಕ್ಕೆ ದೂಡಿದೆ.