ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಈರಾಪುರದಲ್ಲಿ ಬಸ್ ಓಡಾಟಕ್ಕೆ ಅಗತ್ಯವಿರುವ ಕಡೆಗಳಲ್ಲಿ ಗ್ರಾಮಸ್ಥರೇ ರಸ್ತೆ ದುರಸ್ತಿ ಮಾಡಿದ್ದಾರೆ. ಈ ಹಿಂದೆ ಬಸ್ ಸಂಚರಿಸುತ್ತಿದ್ದ ಹೆಬ್ಬಾರಕುಂಬ್ರಿಯಿಂದ ಈರಾಪುರಕ್ಕೆ ತೆರಳುವ ಮಾರ್ಗದಲ್ಲಿ ಸಿಮೆಂಟ್ ರಸ್ತೆ ಇದ್ದರೂ, ಕೆಲವೆಡೆ ಬಸ್ ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಬಸ್ ಚಾಲಕರು ತಕರಾರು ಎತ್ತಿದ್ದರು. ಹೀಗಾಗಿ ಈರಾಪುರಕ್ಕೆ ಬಸ್ ಸಂಚಾರ ಬಂದ್ ಮಾಡಲಾಗಿತ್ತು.
ಪುನಃ ಬಸ್ ಸಂಚಾರ ಆರಂಭಿಸುವಂತೆ ಆ ಭಾಗದ ಮಹಿಳೆಯರು ಇಲಾಖೆಗೆ ಮನವಿ ಸಲ್ಲಿಸಿದ್ದರು. ಮತ್ತೆ ರಸ್ತೆ ವಿಚಾರದಲ್ಲಿ ಚಾಲಕರು ತಕರಾರು ಮಾಡಬಾರದೆಂದು ಮಹಿಳೆಯರು, ಗ್ರಾಮಸ್ಥರು ಸೇರಿ ಇದೀಗ ರಸ್ತೆ ದುರಸ್ತಿ ಮಾಡಿದ್ದಾರೆ.
ಗ್ರಾ.ಪಂ ಸದಸ್ಯ ತಿಮ್ಮಣ್ಣ ಗಾಂವ್ಕರ್ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ರಸ್ತೆಗೆ ಕಡಿ ವ್ಯವಸ್ಥೆ ಕಲ್ಪಿಸಿದ್ದು, ಗ್ರಾಮಸ್ಥರು ಶ್ರಮದಾನದ ಮೂಲಕ ಈರಾಪುರ ಶಾಲೆ, ತ್ರಯಂಬಕೇಶ್ವರ ದೇವಸ್ಥಾನದ ಬಳಿ ಕಡಿ, ಮಣ್ಣು ಹಾಕಿ ರಸ್ತೆ ಸರಿಪಡಿಸಿದರು. ಇನ್ನಾದರೂ ಯಾವುದೇ ನೆಪ ಹೇಳದೇ ಈರಾಪುರಕ್ಕೆ ಬಸ್ ಓಡಾಟ ಆರಂಭಿಸಬೇಕು. ಇಲ್ಲವಾದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.