ಕಾರವಾರ: ಕದ್ರಾ ಜಲಾಶಯದ ಒಳಹರಿವು ಹೆಚ್ವಾಗಿದ್ದು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುವುದರಿಂದ ಆಣೆಕಟ್ಟೆಯ 8 ಗೇಟ್‌ಗಳನ್ನು ತೆರೆದು ನಿರಂತರವಾಗಿ ನೀರನ್ನು ಹೊರಬಿಡಲಾಗುತ್ತಿದೆ.
ಕಾಳಿ ನದಿ ಹರಿಯುವ ಜೋಯಿಡಾ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಹೀಗಾಗಿ ಬೊಮ್ಮನಹಳ್ಳಿ ಜಲಾಶಯದಿಂದ 8,550 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇನ್ನು ಕೊಡಸಳ್ಳಿ ಜಲಾಶಯದಿಂದಲೂ 24,500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹೀಗಾಗಿ ಸಹಜವಾಗಿಯೇ ಕಾರವಾರದ ಕದ್ರಾ ಜಲಾಶಯದ ಒಳಹರಿವು ಹೆಚ್ಚಿದ್ದು ಒಟ್ಟೂ 35,334 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 34 ಮೀ. ಆಗಿದ್ದು ಮುಂದೆ ಪ್ರವಾಹದಂತಹ ಅಪಾಯ ಸಂಭವಿಸುವುದನ್ನು ತಡೆಯಲು 31 ಮೀ. ತಲುಪುತ್ತಿದ್ದಂತೆ ನೀರನ್ನು ಹೊರಬಿಡಲು ಜಿಲ್ಲಾಡಳಿತ ಈ ಮೊದಲೇ ಸೂಚನೆ ನೀಡಿದೆ. ಹೀಗಾಗಿ ಈ ಮಟ್ಟವನ್ನು ತಲುಪಿರುವ ಹಿನ್ನೆಲೆಯಲ್ಲಿ ಒಳಹರಿವಿನಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಯ ಯೂನಿಟ್‌ಗಳ ಮೂಲಕ ಒಟ್ಟೂ 15,134 ಕ್ಯೂಸೆಕ್ ಹಾಗೂ 8 ಕ್ರಸ್ಟ್ ಗೇಟ್‌ಗಳನ್ನು ತೆರೆದು 20,200 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಕಾಳಿ ನದಿತೀರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಿದೆ. ಆ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ನೀರನ್ನು ಜಲಾಶಯಗಳಿಂದ ಹೊರಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದ್ದು ನದಿ ತೀರದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.