ಫೆಂಗಲ್ ಸೈಕ್ಲೋನ್ ಎಫೆಕ್ಟ್ – ಅದ್ಯಪಾಡಿಯಲ್ಲಿ ಭೂಕುಸಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದೆ. ಕಳೆದ 2 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಅದ್ಯಪಾಡಿಯಲ್ಲಿ ಭೂಕುಸಿತವಾಗಿದೆ.

ಬಜಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತ ಸಂಭವಿಸಿದ್ದು, ಬಜಪೆ-ಅದ್ಯಪಾಡಿಯ ಸಂಪರ್ಕ ಕಡಿತಗೊಂಡಿದೆ. ಮಂಗಳೂರು ವಿಮಾನನಿಲ್ದಾಣ ಕೆಳಭಾಗದಲ್ಲಿ ಅದ್ಯಪಾಡಿ ಪ್ರದೇಶ ಇದೆ.

ವಿಮಾನ ನಿಲ್ದಾಣ ಭಾಗದಿಂದ ಮಣ್ಣು ನೀರು ಹರಿದುಬಂದಿದೆ. ಗುಡ್ಡದ ಕೆಳಭಾಗದ ಉಮಾನಾಥ ಸಾಲ್ಯಾನ್ ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಮುಂಭಾಗದ ಅಂಗಳದಲ್ಲಿ ಮಣ್ಣು ಕೆಸರು ತುಂಬಿಕೊಂಡಿದೆ.

ಮಂಗಳೂರು ಏರ್ಪೋರ್ಟ್ ನಿರ್ಲಕ್ಷದಿಂದ ಭೂಕುಸಿತವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್​ಗೆ ದೂರು ನೀಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಚಂಡಮಾರುತದಿಂದ ವಿಮಾನ ನಿಲ್ದಾಣದ ರನ್ ವೇಯಲ್ಲಿ ನೀರು ತುಂಬಿಕೊಂಡಿತ್ತು. ಅವೈಜ್ಞಾನಿಕವಾಗಿ ನೀರನ್ನು ಏರ್​ಪೋರ್ಟ್ ಪ್ರಾಧಿಕಾರ ಹೊರಗೆ ಬಿಟ್ಟಿದೆ. ಏಕಾಏಕಿ ಒಂದೇ ಕಡೆ ನೀರು ಬಿಟ್ಟಿದ್ದರಿಂದ ಅವಘಡ ಉಂಟಾಗಿದೆ. ಇದರಿಂದಾಗಿಯೇ ಭೂಕುಸಿತ ಉಂಟಾಗಿ ಪ್ರವಾಹದ ನೀರು ನುಗ್ಗಿದೆ ಎಂದು ಆರೋಪಿಸಿದ್ದಾರೆ.

ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ತಹಶಿಲ್ದಾರ್ ಪ್ರಶಾಂತ್ ಪಾಟೀಲ್ ಹೇಳಿಕೆ ನೀಡಿದ್ದು, ಭೂ ಕುಸಿತ ವಿಚಾರದಲ್ಲಿ ಏರ್ಪೋರ್ಟ್ ಮೇಲೆ ಆರೋಪ‌ ಮಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಸದ್ಯಕ್ಕೆ ರಸ್ತೆ ಸಂಪರ್ಕ ಸರಿಪಡಿಸುವ ಮತ್ತು ವಿದ್ಯುತ್ ಕಂಬ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಏರ್ಪೋರ್ಟ್ ಆಡಳಿತವನ್ನು ಸಂಪರ್ಕಿಸಿ ಘಟನೆ ಬಗ್ಗೆ ವಿವರಣೆ ಪಡೆಯಲಾಗುವುದು ಎಂದಿದ್ದಾರೆ.