ಅಣಶಿ ಘಟ್ಟ ಭೂಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ: ಸಂಚಾರ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್

ಕಾರವಾರ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಶುಕ್ರವಾರ ಕಂದಾಯ, ಅರಣ್ಯ, ಆರಕ್ಷಕ, ಸಾರಿಗೆ ಮತ್ತು ಲೊಕೋಪಯೋಗಿ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡ ಅಣಶಿ ಘಟ್ಟದಲ್ಲಿ ಉಂಟಾದ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ವೀಕ್ಷಣೆ ನಡೆಸಿತು.

ಭೂಕುಸಿತಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ಮಣ್ಣು ಮತ್ತು ಕಲ್ಲುಗಳು ನಿರಂತರವಾಗಿ ಜಾರುತ್ತಿದ್ದುದರಿಂದ ಈ ಹಿಂದೆ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿತ್ತು. ಅಣಶಿ, ಜೋಯಿಡಾ ಹಾಗೂ ಹಳಿಯಾಳದಿಂದ ಕಾರವಾರ ಹಾಗೂ ಗೋವಾಕ್ಕೆ ಪ್ರಯಾಣಿಸುವ ನಾಗರಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿರುವದರಿಂದ ಹಾಗೂ ಈ ಪ್ರದೇಶದ ಜನರು ಅಣಶಿ ಘಟ್ಟದ ಸಂಚಾರವನ್ನು ಪುನಃ ಆರಂಭಿಸಲು ಆಗ್ರಹಿಸುತ್ತಿದ್ದರಿಂದ ಸ್ಥಳ ಪರಿಶೀಲನೆ ನಡೆಸಿ, ಯಾವುದೇ ಅಪಾಯದ ಮುನ್ಸೂಚನೆ ಇಲ್ಲವೆಂದು ಖಚಿತ ಪಡಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಲು ನಿರ್ಧರಿಸಿದೆ. ಕೆಲವು ಮುಂಜಾಗೃತಾ ಕ್ರಮಗಳಗಳನ್ನು ಅನುಸರಿಸಿ ಅಣಶಿ ಘಟ್ಟದಲ್ಲಿ ಸಂಚಾರವನ್ನು ಮರುಸ್ಥಾಪಿಸಲು ನಿರ್ಧರಿಸಿದೆ.

ಕಂದಾಯ, ಆರಕ್ಷಕ, ಅರಣ್ಯ ಮತ್ತು ಲೊಕೋಪಯೋಗಿ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮೀಕ್ಷಾ ತಂಡವನ್ನು ರಚಿಸಲು ನಿಶ್ಚಯಿಸಲಾಗಿದೆ. ಈ ತಂಡವು ಅಣಶಿ ಘಟ್ಟದ ನಿಖರವಾದ ಸಮೀಕ್ಷೆ ಕೈಗೊಂಡು ಪ್ರತಿಯೊಂದು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಸೂಕ್ತ ಯೋಜನೆಯನ್ನು ರೂಪಿಸುವ ಕಾರ್ಯ ಮಾಡಲಿದೆ. ಇನ್ನು ಮುಂದಿನ ಕೆಲವು ದಿನಗಳಿಗೆ ಅಥವಾ ಮುಂದಿನ ಆದೇಶದವರೆಗೆ ಈ ಹಿಂದಿನಂತೆ ಸಂಜೆ 7.00 ರಿಂದ ಬೆಳಿಗ್ಗೆ 7.00 ಗಂಟೆಯವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪ್ರತಿದಿನ ಅಣಶಿ-ಜೋಯಡಾಕ್ಕೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಮಿನಿ ಬಸ್ಸುಗಳನ್ನು ಬಿಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಈ ಸಂದರ್ಭದಲ್ಲಿ ಕೆ.ಟಿ.ಆರ್. ಡಿಸಿಎಫ್ ಮರಿಯಾ ಕ್ರಿಸ್ತರಾಜ್, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರರಾದ ದೇವಿದಾಸ ಚವ್ಹಾನ್, ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ತಹಸೀಲ್ದಾರ ಎನ್. ಎಫ್. ನೊರೋನಾ ಮುಂತಾದವರು ಇದ್ದರು.

Leave a Reply

Your email address will not be published. Required fields are marked *