ಭಟ್ಕಳ: ಬೀದಿದೀಪ ನಿರ್ವಹಣೆಯ ಟೆಂಡರ್ ನೀಡುವ ಬಗ್ಗೆ ಪುರಸಭೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆ ಪರಸ್ಪರ ಗದ್ದಲಕ್ಕೆ ಕಾರಣವಾಯಿತು.
ಸಭೆಯ ಆರಂಭದಲ್ಲಿ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಮಾತನಾಡಿ ಪುರಸಭೆ ವ್ಯಾಪ್ತಿಯ ಬೀದಿದೀಪ ನಿರ್ವಹಣೆಗೆ ಹೊಸ ಟೆಂಡರ್ ಕರೆಯಲಾಗಿದೆ. ಮೂವರು ಬಿಡ್‌ನಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಭಟ್ಕಳದ ಆಯಿಷಾ ಇಲೆಕ್ಟ್ರಿಕಲ್ಸ್ ಕಡಿಮೆ ಮೊತ್ತದ ಬಿಡ್ ಮಾಡಿದ್ದಾರೆ. ಆದರೆ ಅವರಿಗೆ ಟೆಂಡರ್ ನೀಡಲು ಸಾಧ್ಯವಿಲ್ಲ. ಅವರು ಬೀದಿದೀಪ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಎರಡನೇ ಬಿಡ್‌ದಾರನಿಗೆ ನೀಡಲು ನಿರ್ಧರಿಸಿದ್ದೇವೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಾಧ್ಯಕ್ಷ ಕೈಸರ್, ಆಯಿಷಾ ಇಲೆಕ್ಟ್ರಿಕಲ್ಸ್ ಕಡಿಮೆ ಮೊತ್ತ ಬಿಡ್ ಮಾಡಿದ್ದಾರೆ. ಅವರಿಗೆ ಟೆಂಡರ್ ನೀಡಿದರೆ ನಮಗೆ ವರ್ಷಕ್ಕೆ 2 ಲಕ್ಷ ಉಳಿತಾಯ ಆಗುತ್ತದೆ. ಮೇಲಾಗಿ ಅವರಿಗೆ ಸರಿಯಾದ ಸಮಯದಲ್ಲಿ ಪುರಸಭೆಯಿಂದ ಬಿಲ್ ಪಾವತಿಸದ ಕಾರಣ ನಿರ್ವಹಣೆ ಮಾಡಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಗುತ್ತಿಗೆದಾರ ಸರಿಯಾಗಿ ಬಿಲ್ ನೀಡುವುದಿಲ್ಲ. ಮೂರು ತಿಂಗಳ ಬಿಲ್ ಇಂದು ನೀಡಿದ್ದಾರೆ. ಮತ್ತೆ ಬಿಲ್ ಪಾವತಿ ವಿಳಂಬವಾಗುತ್ತಿದೆ ಎಂದರೆ ಹೇಗೆ.? ಎಂದು ಪ್ರಶ್ನಿಸಿದರು.
ಸದಸ್ಯರಾದ ಕೃಷ್ಣಾನಂದ ಪೈ, ಶ್ರೀಕಾಂತ ನಾಯ್ಕ, ಶ್ರೀಪಾದ ಕಂಚುಗಾರ ಮಾತನಾಡಿ ಹಾಲಿ ಬೀದಿದೀಪ ನಿರ್ವಹಣೆ ಮಾಡುತ್ತಿರುವ ಆಯಿಷಾ ಇಲೆಕ್ಟ್ರಿಕಲ್ಸ್ ಸರಿಯಾಗಿ ಬೀದಿದೀಪ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಹಲವು ಮಹಿಳಾ ಸದಸ್ಯರು ಧ್ವನಿಗೂಡಿಸಿದರು.
ಕೊನೆಯಲ್ಲಿ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಮಾತನಾಡಿ ನಿಯಮದ ಪ್ರಕಾರ ಅವರು ಈ ಟೆಂಡರ್ ಪಡೆಯಲು ಅರ್ಹತೆ ಪಡೆದಿಲ್ಲ. ಹೀಗಾಗಿ ಹಾಲಿ ಟೆಂಡರ್ ಅವಧಿ ಮುಕ್ತಾಯವಾದ ಕಾರಣ ಮುಂದಿನ ಎರಡು ತಿಂಗಳು ಅವರನ್ನೇ ಮುಂದುವರಿಸೋಣ. ಈ ಎರಡು ತಿಂಗಳ ಅವಧಿಯಲ್ಲಿ ಮತ್ತೆ ದೂರುಗಳು ಬಂದಲ್ಲಿ ಮುಂದಿನ ನಿರ್ಣಯ ಮಾಡುತ್ತೇವೆ ಎಂದರು.