ದಿನದ 24 ಗಂಟೆ ನೆರೆಪ್ರವಾಹದ ಬಗ್ಗೆ ನಿಗಾವಹಿಸಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ

ಭಟ್ಕಳ: ಮಳೆಯಿಂದಾಗಿ ನೆರೆ ಪ್ರವಾಹ ಉಂಟಾದ ಸ್ಥಳದಲ್ಲಿ ಕಾಳಜಿ ಕೇಂದ್ರ, ಮನೆ ಸ್ಥಳಾಂತರ, ದೋಣಿ ಅವಶ್ಯಕತೆ ಇರುವ ಪ್ರದೇಶದಲ್ಲಿ ಆಯಾ ಗ್ರಾಮ ಪಂಚಾಯತಿ ನೋಡೆಲ್ ಅಧಿಕಾರಿ ಹಾಗೂ ಪಿಡಿಓಗಳು ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಅವರು ಶನಿವಾರ ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಪ್ರಕ್ರತಿ ವಿಕೋಪದ ಪರಿಹಾರ ಕಾರ್ಯಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಅಪಾರ ಪ್ರಮಾಣದ ಮಳೆ ಉಂಟಾಗುತ್ತಿದ್ದು, ಜನರ ಜೀವನಕ್ಕೆ ಭಾರಿ ಸಮಸ್ಯೆಯಾಗುತ್ತಿದೆ. ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಅಧಿಕಾರಿಗಳು ನಿರಂತರ ಜನರೊಂದಿಗೆ ಸಂಪರ್ಕದಲ್ಲಿರಬೇಕು. ಅಗತ್ಯಬಿದ್ದಲ್ಲಿ ಮುಂಜಾನೆಯೇ ಪಂಚಾಯತ ತೆರೆದು ಅಧ್ಯಕ್ಷರನ್ನೊಳಗೊಂಡಂತೆ ತುರ್ತು ಸಭೆ ನಡೆಸಿ ಪರಿಹಾರದ ಕಾರ್ಯದಲ್ಲಿ ತೊಡಗಿರಬೇಕು ಎಂದರು.

ಇನ್ನು ಗುಡ್ಡ ಕುಸಿತದಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿದ್ದಲ್ಲಿ ಜಾಗರೂಕತೆಯಿಂದ ಮಣ್ಣು ತೆರವು ಮಾಡಬೇಕು ಮತ್ತು ಈ ಬಗ್ಗೆ ಟಾಸ್ಕಪೋರ್ಸ ಬಳಸಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ಅದರ ಖರ್ಚನ್ನು ತಹಸೀಲ್ದಾರರಿಗೆ ನೀಡಬೇಕು. ಒಂದುವೇಳೆ ಪರಿಹಾರದಲ್ಲಿ ತಹಸೀಲ್ದಾರರು ವಿಳಂಬ ಮಾಡಿದ್ದಲ್ಲಿ ನನ್ನ ಗಮನಕ್ಕೆ ತರುವಂತೆಯೂ ತಿಳಿಸಿದರು. ಇನ್ನು ಸಂತ್ರಸ್ತರಿಗೆ ಆಹಾರದ ಕಿಟ್ ಅವಶ್ಯಕತೆ ಇದ್ದಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಜಿಲ್ಲಾ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್, ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತ ಪಿಡಿಓಗಳು ಹಾಜರಿದ್ದರು.

Leave a Reply

Your email address will not be published. Required fields are marked *