ಕುಮಟಾ: ನೆರೆ ಸಂತ್ರಸ್ತ್ರರಿಗೆ ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಲೋಪ ಕಂಡು ಬಂದರೆ ಆಯಾ ಗ್ರಾ.ಪಂ ವ್ಯಾಪ್ತಿಗೆ ನಿಯೋಜನೆಗೊಂಡ ನೋಡಲ್ ಅಧಿಕಾರಿ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಸೂಕ್ತ ಶಿಕ್ಷೆಯಾಗಲಿದೆ ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅವರು ಪಟ್ಟಣದ ತಾ.ಪಂ ಸಭಾಭವನದಲ್ಲಿ ಮಳೆ ಹಾನಿಯ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದರು.
ಮಳೆಯಿಂದ ನೀರು ನುಗ್ಗಿದ ಮನೆಗೆ 10 ಸಾವಿರ, ಭಾಗಶಃ ಹಾನಿಗೆ 50 ಸಾವಿರ ಹಾಗೂ ಸಂಪೂರ್ಣ ಹಾನಿಯಾದ ಮನೆಗಳಿಗೆ ತಕ್ಷಣ 95 ಸಾವಿರ ಹಣ ಅವರ ಖಾತೆಗೆ ಜಮೆ ಮಾಡಬೇಕು. ಸರ್ಕಾರ ನೀಡುವ ಹಣದಲ್ಲಿ ಅಧಿಕಾರಿಗಳು ಮೂಗು ತೂರಿಸುವ ಅವಶ್ಯಕತೆಯಿಲ್ಲ. ಸಂತ್ರಸ್ತ ಕುಟುಂಬಸ್ಥರಿಗೆ ಸರ್ಕಾರದ ಹಣ ಸಂದಾಯವಾಗಬೇಕು. ಇದರಲ್ಲಿ ಯಾವುದೇ ಲೋಪ ಕಂಡುಬರಬಾರದು ಎಂದು ಎಚ್ಚರಿಕೆ ನೀಡಿದರು.
ಕಾಳಜಿ ಕೇಂದ್ರದಲ್ಲಿ ಊಟ, ವಸತಿ, ಬಟ್ಟೆಗಳ ಸರಿಯಾಗಿ ನೋಡಿಕೊಳ್ಳಬೇಕು. ಮಳೆ ಹಾನಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಅದು ಫಲಾನುಭವಿಗಳಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ಮೊಬೈಲ್ ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಆಗಬಾರದು. ಕೇಂದ್ರ ಸ್ಥಳದಲ್ಲಿಯೇ ಇದ್ದು ಜೀವ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯ ಎಂದರು.
ಕುಮಟಾ-ಹೊನ್ನಾವರ ತಾಲೂಕಿನ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಸಭೆಯಲ್ಲಿ ಮಳೆ ಹಾನಿಯ ಕುರಿತು ಮಾಹಿತಿ ನೀಡಿದರು. ಶಾಸಕ ದಿನಕರ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರಾಜು ಮೋಗವಿರ, ಸಹಾಯಕ ಆಯುಕ್ತ ರಾಹುಲ್ ಪಾಂಡೆ, ತಹಸೀಲ್ದಾರ ವಿವೇಕ ಶೇಣ್ವಿ, ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಈಶ್ವರ ನಾಯ್ಕ, ತಾ.ಪಂ ಆಡಳಿತಾಧಿಕಾರಿ ನಾರಾಯಣ ನಾಯಕ, ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ ಸೇರಿದಂತೆ ಮತ್ತಿತರರು ಇದ್ದರು.