ಗೋಕರ್ಣ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ವಿವಿಧ ನದಿಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವು ಮನೆಗಳಿಗೆ ನೀರು ನುಗ್ಗಿ ತಮ್ಮನ್ನು ರಕ್ಷಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇಂತಹ ಭಯದ ಪರಿಸ್ಥಿತಿಯಲ್ಲೂ ಕಳೆದ ಎರಡು ದಿನಗಳಿಂದ ಕಡಲ ತೀರದಲ್ಲಿ ಜನರ ಜಾತ್ರೆಯೇ ನೆರೆದಿದೆ. ಕಾರಣ ಇಷ್ಟೇ ಧಾರಾಕಾರ ಮಳೆ ಸುರಿದಿದ್ದರಿಂದ ಎಲ್ಲಾ ನದಿಗಳು ತುಂಬಿ ಸಮುದ್ರ ಸೇರಿದ್ದು, ತ್ಯಾಜ್ಯಗಳು ಸಮುದ್ರಕ್ಕೆ ಸೇರಿವೆ. ಅಲೆಯ ರಭಸಕ್ಕೆ ತ್ಯಾಜ್ಯವೆಲ್ಲಾ ದಂಡೆಯಲ್ಲಿ ರಾಶಿ ಬಿದ್ದಿದೆ.
ರಾಶಿ ಬಿದ್ದ ತ್ಯಾಜ್ಯಗಳಲ್ಲಿ ಕಟ್ಟಿಗೆ ಮತ್ತು ಮರದ ದಿಣ್ಣೆಗಳನ್ನು ಜನ ಉರುವಲು ಬಳಕೆಗಾಗಿ ತೆಗೆದುಕೊಂಡು ಹೋಗಲು ಮುಗಿಬೀಳುತ್ತಿದ್ದಾರೆ. ಮುಂಜಾನೆಯಿಂದಲೇ ದಡಕ್ಕೆ ಬಂದ ಕಟ್ಟಿಗೆಗಳ ರಾಶಿಯನ್ನು ಜನ ತುಂಡರಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು. ಮಕ್ಕಳು, ಮಹಿಳೆಯರೆನ್ನದೇ ಉರುವಲಿಗಾಗಿ ಜನ ಮುಗಿಬಿದ್ದಿದ್ದರು.
ಮುಖ್ಯ ಕಡಲತೀರದ ಬಳಿ ಮೀನುಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು ಬೇಸಿಗೆಯಲ್ಲಿ ಬೆಟ್ಟಗಳಿಗೆ ತೆರಳಿ ಉರುವಲು ಸಂಗ್ರಹಿಸುತ್ತಿದ್ದರು. ಆದರೆ ಪ್ರತಿ ಮಳೆಗಾಲದಲ್ಲೂ ಸಮುದ್ರದಲ್ಲಿ ತೇಲಿ ಬಂದ ಕಟ್ಟಿಗಳನ್ನ ಸಂಗ್ರಹಿಸಿ ಇದನ್ನೆ ಉರುವಲಿಗೆ ಬಳಕೆ ಮಾಡುತ್ತಾರೆ. ಈ ಬಾರಿಯಂತೂ ಸಾಕಷ್ಟು ಪ್ರಮಾಣದಲ್ಲಿ ಕಟ್ಟಿಗೆ ರಾಶಿ ಬಂದು ಬಿದ್ದಿರುವುದರಿಂದ ಕೆಲವರು ವಾಹನಗಳಲ್ಲಿ ತುಂಬಿ ಮನೆಗಳಿಗೆ ಸಾಗಿಸಿದ್ದಾರೆ. ಮಳೆಯ ಅಬ್ಬರವೂ ಕೊಂಚ ಕಡಿಮೆಯಾಗಿದ್ದು, ಕಟ್ಟಿಗೆ ಸಂಗ್ರಹಕ್ಕೆ ಅನುಕೂಲ ಮಾಡಿಕೊಟ್ಟಿದೆ.