ಹಣ ಬಿಡುಗಡೆಯಾಗದೇ ಗುತ್ತಿಗೆದಾರರು ಅತಂತ್ರರಾಗಿದ್ದಾರೆ: ರಾಮನಾಥ ಶಾನಭಾಗ

ಶಿರಸಿ: ಪ್ರಕೃತಿ ವಿಕೋಪ ಅಡಿಯಲ್ಲಿ ಮುಖ್ಯಮಂತ್ರಿ ಮಂಜೂರು ಮಾಡಿದ 100 ಕೋಟಿ ರೂಗಳಲ್ಲಿ ಇನ್ನೂ 82 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಕೆಲಸ ನಿರ್ವಹಿಸಿದ ಗುತ್ತಿಗೆದಾರರು ಅತಂತ್ರರಾಗಿದ್ದು, ತಕ್ಷಣ ಈ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮನಾಥ ಶಾನಭಾಗ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ವರ್ಷ ಮತ್ತೆ ಫ್ಲಡ್ ಹಣ ಮಂಜೂರು ಮಾಡಲು ಯೋಜಿಸಿದೆ. ಕಳೆದ ವರ್ಷದ ಹಣವೇ ಬರದೇ ಗುತ್ತಿಗೆದಾರರು ಅತಂತ್ರವಾಗಿರುವಾಗ ಈಗ ಮತ್ತೆ ಕಾಮಗಾರಿಗಳನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ವಿಧಾನ ಸಭಾಧ್ಯಕ್ಷರು, ಸಚಿವರು ನಮ್ಮ ಜಿಲ್ಲೆಯವರೇ ಇದ್ದರೂ ಈ ಸಮಸ್ಯೆ ಆಗಿದೆ. ತಕ್ಷಣ ಈ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ರಮೇಶ ದುಬಾಶಿ ಮಾತನಾಡಿ, ಜಲ್ಲಿ ಕಲ್ಲಿಗೆ ಹೊರ ಜಿಲ್ಲೆಯನ್ಬು ಅವಲಂಬಿಸಿದ್ದೇವೆ. ಹೀಗಾಗಿ ನಿಗದಿತ ಹಣಕ್ಕಿಂತ ಜಾಸ್ತಿ ಖರ್ಚಾಗುತ್ತಿದೆ. ಆಯಾ ಜಿಲ್ಲೆಯ ಕೆಲಸ ಆಯಾ ಜಿಲ್ಲೆಯವರಿಗೇ ನೀಡಬೇಕು ಎಂದರು.

ಈ ವೇಳೆ ಸಂಘದ ಉಪಾಧ್ಯಕ್ಷ ಮಾಧವ ನಾಯ್ಕ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಹಿರೇಮಠ, ಖಜಾಂಚಿ ಗಣೇಶ ದಾವಣಗೆರೆ, ಪ್ರಮುಖರಾದ ನಾಗೇಶ ನಾಯ್ಕ, ದೀಪಕ ನಾಯ್ಕ, ಅನೀಲ ಮಾಳ್ಸೇಕರ್, ಪ್ರಶಾಂತ ನಾಯ್ಕ, ವಸಂತ ಹರಿಕಂತ್ರ, ವಿ.ಎಂ.ಹೆಗಡೆ, ಶ್ಯಾಮಸುಂದರ ಭಟ್ಟ ಹಾಜರಿದ್ದರು.