ಶಿರಸಿ: ಪಿ ಎಚ್ ಡಿ ಪ್ರಬಂಧ ಮಂಡನೆಯಲ್ಲಿ ಕೃತಿ ಚೌರ್ಯ ಹೆಚ್ಚಾಗುತ್ತಿದೆ. ಗೂಗಲ್ ಸಹಾಯ ಪಡೆಯುವ ಬದಲು ಸ್ಥಳಕ್ಕೆ ತೆರಳಿ ಸಂಶೋಧನೆ ಮಾಡಬೇಕು. ಕೃತಿಚೌರ್ಯ ಹಾಗೂ ಗುಣಮಟ್ಟ ಕುಸಿತಕ್ಕೆ ಮಾರ್ಗದರ್ಶಕರೂ ಹೊಣೆಗಾರರಾಗುತ್ತಾರೆ ಎಂದು ಹಿರಿಯ ಸಂಶೋಧಕ, ಮಂಗಳೂರಿನ ಪ್ರೊ. ಎ.ವಿ ನಾವಡ ಹೇಳಿದರು. ತಾಲೂಕಿನ ಸ್ವಾದಿ ದಿಗಂಬರ ಜೈನ ಮಠದಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿರುವ ಐದು ದಿನಗಳ ಸಂಶೋಧನಾ ಕಮ್ಮಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೊಸ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತಹ ಆಸಕ್ತಿಕರ ವಿಷಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಂಶೋಧನೆ ತಪಸ್ಸಿದ್ದಂತೆ. ಸತತ ಸಾಧನೆಯ ಅಗತ್ಯತೆ ಇದೆ. ಸಂಶೋಧನೆ ಎಂದರೆ ಸ್ಥಾಪಿತ ಸತ್ಯಗಳ ಮರು ಶೋಧವೂ ಹೌದು ಎಂದು ನಾವಡ ಅಭಿಪ್ರಾಯಪಟ್ಟರು.
ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸಂಶೋಧನೆ ಇಂದಿನ ದಿನದ ಅಗತ್ಯತೆ ಆಗಿದೆ. ಹಿಂದೆ ನಡೆದಿದ್ದನ್ನು ತಿಳಿದುಕೊಂಡಾಗ ಮಾತ್ರ ಮುಂದಿನ ಹೆಜ್ಜೆ ಸಮರ್ಪಕವಾಗುತ್ತದೆ. ಹೀಗಾಗಿ, ಹಿಂದಿನ ಸಂಶೋಧನೆಯ ಜ್ಞಾನ ಅತ್ಯಗತ್ಯವಾಗಿದೆ ಎಂದರು.
ಕಮ್ಮಟನಿರ್ದೇಶಕ ಶಿವಾರೆಡ್ಡಿ ಮಾತನಾಡಿ ಇದುವರೆಗೆ ನಡೆದ ಸಂಶೋಧನೆಗಳನ್ನು ಆಧರಿಸಿ ನಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳೇ ಮೂಡುತ್ತಿದೆ. ಸಂಶೋಧಕರು ಇದೇ ಶ್ರೇಷ್ಠ ಎಂಬುದನ್ನು ತಲೆಯಿಂದ ಓಡಿಸಿ ಹೊಸ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು ಎಂದರು.
ರಜಿಸ್ಟ್ರಾರ್ ಕರಿಯಪ್ಪ, ಸದಸ್ಯ ಸಂಚಾಲಕರಾದ ಗುರುದತ್ತ ಹೆಗಡೆ, ಡಾ. ಜಿನದತ್ತ ಹಡಗಲಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.