ನವದೆಹಲಿ: ಇಂದಿನಿಂದ ಆರಂಭಗೊಂಡ ಮೊದಲ ದಿನದ ರಾಜ್ಯಸಭಾ ಕಲಾಪವನ್ನ ಪ್ರತಿಪಕ್ಷಗಳ ಗದ್ದಲ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಮುಂದೂಡಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಇತ್ತೀಚಿಗೆ ನಿಧನರಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ಮತ್ತಿತರರ ಗಣ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಬಳಿಕ ಕಾಂಗ್ರೆಸ್ ಸದಸ್ಯ ದೀಪೆಂದರ್ ಹೂಡಾ ನಿಯಮ 267 ರ ಅಡಿಯಲ್ಲಿ ಅಗ್ನಿಪಥ್ ಯೋಜನೆ ಕುರಿತ ಚರ್ಚೆಗೆ ಒತ್ತಾಯಿಸಿದರು. ಮತ್ತೋರ್ವ ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹಾ ಗೋಯಿಲ್, ಕೂಡಲೇ ಅಗ್ನಿಪಥ್ ಯೋಜನೆ ರದ್ದುಪಡಿಸಬೇಕೆಂದು ಆಗ್ರಹಿಸಿದರು. ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್ ಟಿ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ನಂತರ ಸದನದ ಬಾವಿಗಿಳಿದು ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಇಂದಿನಿಂದ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನದ ರಾಜ್ಯಸಭೆ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.