ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕರ್ನಾಟಕದ ಮಾರ್ಗರೇಟ್ ಆಳ್ವಾ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ವಿಪಕ್ಷಗಳ ಸಭೆ ಬಳಿಕ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆಳ್ವಾ ಅವರ ಹೆಸರನ್ನು ಘೋಷಿಸಿದ್ದಾರೆ. ರಾಜಸ್ಥಾನ, ಗೋವಾ, ಗುಜರಾತ್ ಮತ್ತು ಉತ್ತರಾಖಂಡ್ ರಾಜ್ಯಪಾಲರಾಗಿ ಆಳ್ವಾ ಅವರು ಸೇವೆ ಸಲ್ಲಿಸಿದ್ದಾರೆ.
ಮಾರ್ಗರೇಟ್ ಆಳ್ವಾ ಅವರ ಹಿನ್ನೆಲೆ
80 ರ ಹರೆಯದ ಮಾರ್ಗರೇಟ್ ಆಳ್ವಾ ಅವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದು ಹೆಚ್ಚಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ತೆರಳಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ನಂತರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ವಕೀಲೆಯಾಗಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಇನ್ನು ಮಾರ್ಗರೇಟ್ ಆಳ್ವಾ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ, ಗೋವಾ, ಗುಜರಾತ್, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕಿ ಆಳ್ವಾ ಅವರು ರಾಜ್ಯಸಭೆ, ಲೋಕಸಭಾ ಸದಸ್ಯೆಯಾಗಿ, ಕೇಂದ್ರ ಸಚಿವೆಯಾಗಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಮಾರ್ಗರೇಟ್ ಆಳ್ವಾ ಅವರ ಪತಿ ನಿರಂಜನ್ ಥಾಮಸ್. ಆಳ್ವಾರಿಗೆ ಒಬ್ಬ ಮಗಳು ಮತ್ತು ಮೂವರು ಗಂಡು ಮಕ್ಕಳಿದ್ದಾರೆ.
ಇನ್ನು ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಪ್ರಸ್ತುತ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿರುವ ಜಗದೀಪ್ ಧನ್ಖರ್ ಅವರು ಕಣದಲ್ಲಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದ್ದು, ಆಗಸ್ಟ್ 6 ರಂದು ಚುನಾವಣೆ ನಿಗದಿಯಾಗಿದೆ.