ಎಲೆಕ್ಟ್ರಿಕಲ್ ಬೈಕ್ ಶೋ ರೂಂಗೆ ಬೆಂಕಿ- ಮಾಲೀಕನಿಗಾಗಿ ಶೋಧ…!

ಬೆಂಗಳೂರು ನೆವೆಂಬರ್‌ 20 : ಭಾರೀ ಅಗ್ನಿ ಅನಾಹುತ ಸಂಭವಿಸಿದ ರಾಜಾಜಿನಗರದ ಎಲೆಕ್ಟ್ರಿಕಲ್ ಬೈಕ್ ಶೋ ಮಾಲೀಕ ಪುನೀತ್ ಗೌಡ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ. ದುರಂತದಲ್ಲಿ ಸಜೀವ ದಹನವಾಗಿದ್ದ ಪ್ರಿಯಾ ಯುವತಿಯ ಸಹೋದರ ಪ್ರತಾಪ್ ನೀಡಿದ ದೂರು ಆಧರಿಸಿ ಶೋ ರೂಮ್ ಮಾಲೀಕ, ಮ್ಯಾನೇಜರ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 106 ಅಡಿಯಲ್ಲಿ (ನಿರ್ಲಕ್ಷ್ಯ ಸಾವು) ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಹೊತ್ತಿಕೊಂಡಿರಬಹುದಾ ಅಥವಾ ಇವಿ ವಾಹನದ ಬ್ಯಾಟರಿ ಸ್ಫೋಟಗೊಂಡಿರಬಹುದಾ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಕಿಯ ಕೆನ್ನಾಲಿಗೆಗೆ ಶೋರೂಂನಲ್ಲಿದ್ದ ಬೈಕ್‌ಗಳು ಸುಟ್ಟು ಕರಕಲಾಗಿವೆ. ಕಟ್ಟಡಕ್ಕೂ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಬಂದು ವೈಜ್ಞಾನಿಕವಾಗಿ ಪರಿಶೀಲಿಸಲಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವ ಪ್ರಿಯಾಳ ಮೃತದೇಹದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ನಡೆಸಿ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ..