ಶಿರೂರು ಗುಡ್ಡ ಕುಸಿತ: ನಾಪತ್ತೆಯಾದ ಮೂವರ ಮೃತ ದೇಹ ಪತ್ತೆಗೆ ‘ಪೊಕಲೇನ್’ಬಳಕೆ, ಏನಿದು ಯಂತ್ರ?

ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಣ್ಣು ತೆರವು ಕಾರ್ಯಾಚರಣೆ ಮುಗಿದಿದೆ. ನದಿಯಲ್ಲಿ ಇನ್ನುಳಿದ ಮೃತ ದೇಹಗಳು ಇರುವ ಶಂಕೆ ವ್ಯಕ್ತವಾಗಿದ್ದು, ಗಂಗಾವಳಿ ನದಿಯಲ್ಲಿ ಪೊಕಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

ಉತ್ತರ ಕನ್ನಡ, ಜು.23: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನುಳಿದಂತೆ ನಾಪತ್ತೆಯಾದ ಮೂವರ ಮೃತದೇಹ ಪತ್ತೆಗೆ ಗಂಗಾವಳಿ ನದಿಯಲ್ಲಿ ಪೊಕಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

ಅಂಕೋಲಾದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಮಣ್ಣು ತೆರವು ಕಾರ್ಯಾಚರಣೆ ಇಂದು ಮುಗಿದಿದೆ. ಗುಡ್ಡದ ಪಕ್ಕ ಕೇರಳದ ಲಾರಿ ಸಿಕ್ಕಿಲ್ಲ. ನದಿ ಪಕ್ಕದಲ್ಲಿ ಲಾರಿ ಬಿದ್ದಿರುವ ಸಾಧ್ಯತೆಯಿದೆ. ನಾಳೆ ಗೋಕಾಕ್​ನಿಂದ ಪೋಕ್​ಲೇನ್ ವಾಹನ ಬರುತ್ತಿದೆ. ನದಿಯೊಳಗೆ ಮಣ್ಣು ತೆಗೆದು ಕಾರ್ಯಾಚರಣೆ ನಡೆಸಲಿದೆ. ನಾಳೆ ಬಹುತೇಕ ಕೇರಳದ ಲಾರಿ ಸಿಗುವ ಸಾಧ್ಯತೆಯಿದ್ದು, ಕೇರಳದವರು ಕೇಸ್ ಮಾಡುವ ಬದಲು ನಮಗೆ ಸಹಕರಿಸಬೇಕು ಎಂದರು.

ಏನಿದು ಪೊಕಲೇನ್ ಯಂತ್ರ?

ಈ ಪೊಕಲೇನ್ ವೆಹಿಕಲ್, ‘ನದಿಯ ಆಳದಲ್ಲಿರುವ ಮಣ್ಣನ್ನು ತೆರವು ಮಾಡುವ ಯಾಂತ್ರಿಕ ವಾಹನವಾಗಿದೆ. ನದಿಯಲ್ಲಿ ಇನ್ನುಳಿದ ಮೃತ ದೇಹಗಳು ಇರುವ ಶಂಕೆ ವ್ಯಕ್ತವಾಗಿದ್ದು, ಕರ್ನಾಟಕದ ಇರ್ವರು ಹಾಗೂ ಓರ್ವ ಕೇರಳ ಮೂಲದ ವ್ಯಕ್ತಿಯ  ಮೃತ ದೇಹಗಳನ್ನು ಪತ್ತೆ ಮಾಡಬೇಕಿರುವ ಹಿನ್ನಲೆ ಶಾಸಕ ಸತೀಶ್ ಸೈಲ್ ‘ಪೊಕಲೇನ್’ ವ್ಯವಸ್ಥೆ ಮಾಡಿದ್ದಾರೆ. ಇನ್ನು ಈ 60 ಅಡಿ ಉದ್ದವಾದ ಡೀಪ್ ಪೊಕಲೇನ್ ಗೋಕಾಕಲ್ಲಿತ್ತು. ರಾಷ್ಟ್ರೀಯ ಹೆದ್ದಾರಿಯ ಮೇಲಿನ ಮಣ್ಣನ್ನು ತೆರವು ಮಾಡಲಾಗಿದ್ದು, ದೊಡ್ಡ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ. ಹೀಗಾಗಿ  ಪೊಕಲೇನ್ ಮೂಲಕ ನಾಳೆಯಿಂದ ಕಾರ್ಯಚರಣೆ ನಡೆಯಲಿದೆ.