ಪೊಲೀಸ್ ಸಿಬ್ಬಂದಿಯಿಂದಲೇ ಅಕ್ರಮ ಸಾರಾಯಿ ಸಾಗಾಟ: ಪೊಲೀಸರಿಂದಲೇ ಬಂಧನ

ಗೋಕರ್ಣ: ಪೊಲೀಸ್ ಸಿಬ್ಬಂದಿ ಓರ್ವ, ಅಕ್ರಮ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರ ಕೈಗೆ ಸಿಕ್ಕಿ ಬಿದ್ದ ಅಪರೂಪದ ಘಟನೆ ಇಲ್ಲಿನ ಓಂ ಬೀಚ್ ನಲ್ಲಿ ನಡೆದಿದ್ದು ಬಂಧಿತ ಆರೋಪಿಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಗೋವಾ ಸರಾಯಿ ವಶಪಡಿಸಿಕೊಳ್ಳಲಾಗಿದೆ.

ಈ ಹಿಂದೆ ಜಿಲ್ಲೆಯ ಅಂಕೋಲಾ ಮತ್ತಿತರೆಡೆ ಸೇವೆ ಸಲ್ಲಿಸಿ, ಹಾಲಿ ಕಾರವಾರದ ಕದ್ರಾ ಪೊಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ ಲಮಾಣಿ ಎಂಬಾತನನ್ನು ಗೋವಾ ಸರಾಯಿ ಸಾಗಾಟದ ಸಂದರ್ಭದಲ್ಲಿ ವಶಕ್ಕೆ ಪಡೆದ ಗೋಕರ್ಣ ಪೊಲೀಸರು,
ಈತನ ಜೊತೆಗಿದ್ದ ನಿಜಾಮ ಎಂಬಾತನನ್ನು ಸಹ ಬಂಧಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ ಏನ್ನಲಾಗಿದೆ.

ಪೊಲೀಸ್ ಕಾನ್ಸಟೇಬಲ್ ಸಂತೋಷ ಲಮಾಣಿ ,ಕಾರಿನಲ್ಲಿಯೇ ಅಕ್ರಮವಾಗಿ ಗೋವಾ ಸರಾಯಿ ಸಾಗಾಟ ನಡೆದಿತ್ತು ಎನ್ನಲಾಗಿದ್ದು ಗೋಕರ್ಣ ಸುತ್ತ ಮುತ್ತಲಿನ ಕೆಲವಡೆ ಇವರು ಗೋವಾ ಸರಾಯಿ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಜಿಲ್ಲೆಯ ಇತರೆಡೆಯೂ ಇವರು ಕಳ್ಳ ದಂಧೆ ನಡೆಸುತ್ತಿದ್ದರೇ ? ಚೆಕ್ ಪೋಸ್ಟ್ ನಲ್ಲ ವಾಹನ ಚಲಾಯಿಸುವಾಗ ಇವರು ಖಾಕಿ ಧರಿಸಿಯೇ ಬರುತ್ತಿದ್ದರೇ ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬಂದಿದೆ.

ಇಲಾಖೆಗೆ ಕೆಟ್ಟ ಹೆಸರು ತರುವ ಇಂತಹ ನಡವಳಿಕೆಗೆ ಅವಕಾಶ ಇಲ್ಲ ಎಂಬಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಬ್ಬಂದಿಯ ಮೇಲೆ ಕಠಿಣ ಶಿಸ್ತಿನ ಕ್ರಮ ಜರುಗಿಸುವ ಸಾಧ್ಯತೆ ಇದೆ. ಕಳೆದ ಕೆಲ ವರ್ಷಗಳ ಹಿಂದೆಯೂ ರಾಷ್ಟ್ರೀಯ ಹೆದ್ದಾರಿ ಕಾರವಾರ-ಅಂಕೋಲಾ ಮಾರ್ಗ ಮಧ್ಯೆ ಇದೇ ರೀತಿ ಅಕ್ರಮ ಗೋವಾ ಸರಾಯಿ ಸಾಗಾಟದಲ್ಲಿ ತೊಡಗಿದ್ದ ಖಾಕಿ ಪಡೆಯವರನ್ನು – ಖಾಕಿ ಪಡೆಯವರೇ ವಶಕ್ಕೆ ಪಡೆದಿದ್ದನ್ನು ಸ್ಮರಿಸಿರುವ ಕೆಲವರು,ಕರ್ನಾಟಕ ಪೊಲೀಸ್ ಎಂದರೆ ಅದೊಂದು ಹೆಮ್ಮೆ ಮತ್ತು ಕಾನೂನು ರಕ್ಷಣೆಯ ಸಾಮರ್ಥ್ಯದ ಸಂಕೇತ ಎನ್ನುವ ಭಾವನೆ ಹಲವರಲ್ಲಿದೆ.

ಆದರೆ ಇಲ್ಲೊಬ್ಬ ಪೊಲೀಸಪ್ಪ ತಾನು ಧರಿಸುವ ಖಾಕಿ ಸಮವಸ್ತ್ರದ ಗೌರವ ಎತ್ತಿ ಹಿಡಿಯುವ ಬದಲು, ಅಡ್ನಾಡಿ ದಂಧೆ ಮಾಡಲು ಹೋಗಿ ಇಲಾಖೆಯ ಗೌರವಕ್ಕೂ ಕುಂದು ತಂದಂತಿದೆ. ಈಗಲಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತು,ಮುಂದೆ ಮತ್ತೆ ಇಂತಹ ಘಟನೆಗಳಿಗೆ ಅವಕಾಶ ಇಲ್ಲದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ತನ್ನ ಘನತೆ ಕಾಯ್ದುಕೊಳ್ಳುವ ಜೊತೆ, ಕಳ್ಳ ದಂಧೆ ಕೋರರಿಗೆ ಎಚ್ಚರಿಕೆ ಸಂದೇಶ ನೀಡಬೇಕೆಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.