ಜೋಯಿಡಾ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ದಿಪಡಿಸಿದ ರಸ್ತೆ, ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲೇ ಕೆಸರು ಗದ್ದೆಯಾಗಿ ಮಾರ್ಪಾಡಾಗಿದೆ. ಇದರಿಂದ ಶಾಲಾ ಮಕ್ಕಳು ಮತ್ತು ಜನರ ಓಡಾಟಕ್ಕೆ ತೀವ್ರ ತೊಂದರೆಯುಂಟಾಗಿದೆ. ಕಳಪೆ ಕಾಮಗಾರಿ ಬಗ್ಗೆ ದೂರು ನೀಡಿದರೂ ನಿರ್ಲಕ್ಷ ಮಾಡಿದ ಅಧಿಕಾರಿಗಳಿಂದಲೇ ಹೀಗಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಳಪೆ ಕಾಮಗಾರಿ ಬಗ್ಗೆ ಮೊದಲೇ ದೂರಿದ್ದ ಸ್ಥಳೀಯರು.!
ಹೌದು.! ಜೊಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಗೋಡೆಗಾಳಿ ರಸ್ತೆಯನ್ನು ಜಿಲ್ಲಾ ಪಂಚಾಯತ ಇಂಜನಿಯರಿಂಗ್ ವಿಭಾಗದಿಂದ ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಎಚ್ಚರಿಸಿದ್ದರೂ ನಿರ್ಲಕ್ಷ ಮಾಡಿದ್ದಾರೆ ಅನ್ನೋ ಅರೋಪ ಕೇಳಿ ಬಂದಿದೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಹಾಗೂ ಇಬ್ಬರು ವಿಶೇಷ ಚೇತನ ಮಕ್ಕಳು ಪ್ರತಿದಿನ ಸಂಚರಿಸುತ್ತಾರೆ. ಆದರೆ ರಸ್ತೆ ಇದೀಗ ಕೆಸರು ಗದ್ದೆಯಂತಾಗಿದ್ದು ನಿತ್ಯ ಈ ರಸ್ತೆಯಲ್ಲಿ ಓಡಾಡುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಕಳಪೆ ರಸ್ತೆ ಕಾಮಗಾರಿಗೆ ಅಸಮಾಧಾನ.!
ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಮಾಡಿದ ಈ ಕಾಮಗಾರಿಗೆ 10 ಲಕ್ಷ ರೂ ಮಂಜೂರಾಗಿತ್ತು. ಇದರಲ್ಲಿ 600 ಮೀ ರಸ್ತೆಗೆ ಕೇವಲ 6 ಲಕ್ಷ ರೂ ಅನುದಾನ ಬಳಸಲಾಗಿದೆ. ಉಳಿದ 4 ಲಕ್ಷದಲ್ಲಿ ರಸ್ತೆಗೆ ತಡೆಗೋಡೆ ನಿರ್ಮಿಸಿದ್ದಾರೆ. ಎಸ್ಟಿಮೇಟ್ ನಲ್ಲಿರುವಂತೆ ರಸ್ತೆಗೆ ಕಡೀಕರಣವನ್ನೂ ಸರಿಯಾಗಿ ಮಾಡಿಲ್ಲ. ಜೊತೆಗೆ ರೋಲರ್ ಕೂಡಾ ಹಾಕಿಲ್ಲವಾದ್ದರಿಂದ ಈಗ ರಸ್ತೆಯ ಸ್ಥಿತಿ ಹೀಗಾಗಿದೆ ಎಂಬುದು ಸ್ಥಳಿಯರ ಆರೋಪ. ಕೂಡಲೆ ನಮ್ಮ ರಸ್ತೆ ಸರಿಪಡಿಸಿ ಕೊಡಬೇಕು ಮತ್ತು ನಿರ್ಲಕ್ಷ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಎರಡು ತಿಂಗಳ ಹಿಂದೆ ಮಾಡಿದ ಈ ರಸ್ತೆ ಕಾಮಗಾರಿ ಕಳಪೆಯಾಗಿರುವ ಕಾರಣ ಈಗ ಕೆಸರು ಗದ್ದೆಯಂತಾಗಿದೆ. ಈ ಬಗ್ಗೆ ಜಿ.ಪಂ ಎಇಇ ಮಹ್ಮದ ಇಜಾನ ಅವರಿಗೆ ಹಲವು ಬಾರಿ ತಿಳಿಸಿದರೂ ಸ್ಪಂದಿಸಿಲ್ಲ. ಗುತ್ತಿಗೆದಾರರಿಗೆ ನಾವೇ ಬಿಲ್ ಮಾಡುವುದು ಒಂದುವೇಳೆ ಕಳಪೆ ಕಾಮಗಾರಿಯಾದರೆ ಗುತ್ತಿಗೆದಾರರಿಂದ ನಾವೇ ಸರಿ ಮಾಡಿಸಿ ಕೊಡುತ್ತೇವೆ ಎಂದಿದ್ದರು. ಗುತ್ತಿಗೆದಾರರ ಜೊತೆ ಶಾಮಿಲಾಗಿ ಕಳಪೆ ಕಾಮಗಾರಿಗೆ ಕಾರಣರಾದ ಇವರ ಮೇಲೆ ಕ್ರಮ ಕೈಗೊಳ್ಳಬೇಕು.’
– ತುಳಸಿದಾಸ ವೇಳಿಪ, ಸ್ಥಳಿಯರು
‘ಕಡೀಕರಣ ಮಾಡಿದ ಮೇಲೆ ಹಾಕಿದ ಮಣ್ಣು ಸ್ವಲ್ಪ ಹೆಚ್ಚಾಗಿದೆ. ಮಳೆಗಾಲ ಮುಗಿದ ನಂತರ ಮತ್ತೆ ರೋಲರ್ ಹಾಕಿ ಸರಿಮಾಡಲಾಗುವುದು.’
– ಮೊಹಮದ್ ಇಝಾನ ಸುಬೇರ, ಎಇಇ, ಜಿ.ಪಂ ಇಂಜನಿಯರಿಂಗ್ ವಿಭಾಗ
ಒಟ್ಟಾರೆ ಪ್ರತಿದಿನ ಅದೇ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.