ಕಾರವಾರ: ಕಂಟೇನರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಬಿಣಗಾದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಅಧಿಕೃತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಂಟೇನರ್ ಲಾರಿಯನ್ನು ತಡೆದು, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 26 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಗೋವಾದಿಂದ ಅಂಕೋಲಾ ಮಾರ್ಗವಾಗಿ ಹೈದ್ರಾಬಾದ್ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿಯನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲಾರಿಯಲ್ಲಿ 814 ಬಾಕ್ಸ್ಗಳಿದ್ದ ಸುಮಾರು 26,29,536 ರೂ. ಮೌಲ್ಯದ, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಪರವಾನಗಿ ಇರುವ 30,212 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಚಾಲಕ ಮಹಾರಾಷ್ಟ್ರ ಮೂಲದ ಸುಧಾಕರ ಅರ್ಜುನ ಗೋಲಾಂಡೆ ಎಂಬಾತನನ್ನು ಬಂಧಿಸಿ ಲಾರಿಯನ್ನೂ ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಜಿಲ್ಲಾ ವಿಶೇಷ ವಿಭಾಗದ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ, ಭಗವಾನ ಗಾಂವಕರ, ಸಂತೋಷಕುಮಾರ ಕೆ.ಬಿ, ಚಾಲಕ ಉಮೇಶ ಗಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.