ಭಟ್ಕಳ: ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯು ಜನರನ್ನ ಆತಂಕಕ್ಕೆ ದೂಡಿದೆ. ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ಹಲವಾರು ಮನೆಗಳಿಗೆ ಹಾನಿಯುಂಟಾಗಿದೆ.
ತಾಲೂಕಿನ ಮಾವಳ್ಳಿ-1 ಗ್ರಾಮದ ಕೃಷ್ಣ ಈರಪ್ಪ ನಾಯ್ಕ ಹಾಗೂ ರಾಮ ದೇವಪ್ಪ ದೇವಡಿಗ ಅವರ ವಾಸ್ತವ್ಯದ ಮನೆ ಹಾನಿಗೊಳಗಾಗಿದೆ. ಮಾವಳ್ಳಿ-2 ಗ್ರಾಮದ ಗರ್ಡಿಗದ್ದೆ ಮಜರೆಯ ಕರಿಯಮ್ಮ ಅವರ ಜಮೀನಿನಲ್ಲಿ ಆಲದ ಮರವೊಂದು ಬಿದ್ದು ಕಂಪೊಂಡ್ ಕುಸಿತವಾಗಿದೆ.
ಇನ್ನು ಕಾಯ್ಕಿಣಿ ಗ್ರಾಮದ ಸಭಾತಿ ಬಿಳಿಯಮ್ಮ ದುರ್ಗಪ್ಪ ನಾಯ್ಕ ಇವರ ಮನೆಯ ಗೋಡೆ ಕುಸಿದು ಬಿದ್ದು ಹಾನಿಯಾಗಿದೆ. ಜೊತೆಗೆ ಕಾಯ್ಕಿಣಿ ಸಭಾತಿಯ ಗಣಪತಿ ಸುಬ್ರಾಯ ನಾಯ್ಕ ಇವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ.
ಕಾಯ್ಕಿಣಿ ಹಾಲಿಬಡ್ರು ಮಜರೆಯ ಶಾರದಾ ದೇವಡಿಗ, ಕಾಯ್ಕಿಣಿ ಅಬ್ರೆ ಮಜರೆಯ ಗೊಯ್ದ ಗೊಂಡ ಹಾಗೂ ಕಾಯ್ಕಿಣಿ ಗ್ರಾಮದ ಮಾಸ್ತಮ್ಮ ಶನಿಯಾರ ನಾಯ್ಕ ಇವರ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶೇಡ್‌ಕುಳಿಯ ಆಶೀಯಾ ಮಹಮ್ಮದ ಇಲೀಯಾಸ್ ಶೇಕ್ ಇವರ ಮನೆ ಹಾನಿಯಾಗಿದೆ.
ಇನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.