ಕಾರವಾರ: ಶಿಕ್ಷಣದ ಬಗ್ಗೆ ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಇರುವ ಕಾಳಜಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಪ್ರಶಂಸಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಶಿಕ್ಷಣದ ಕುರಿತು ತಮಗಿರುವ ಕಾಳಜಿಗೆ ಅಭಿನಂದನೆಗಳು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ರೀಜನಲ್ ಇಕೋಸಿಸ್ಟಮ್ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್ (ಕೆ.ಐ.ಟಿ) ಯೋಜನೆಯಡಿ ಇನ್ನು 5 ವರ್ಷಗಳಲ್ಲಿ ಅತ್ಯುತ್ಕೃಷ್ಟವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ಮನವಿ ಪುರಸ್ಕರಿಸಿ ಕಾರವಾರದ ಇಂಜಿನಿಯರಿಂಗ್ ಕಾಲೇಜನ್ನು ಉನ್ನತೀಕರಿಸಲು ಸರ್ಕಾರ ನಿರ್ಧರಿಸಿದ ಬಗ್ಗೆ ಟ್ವೀಟ್ ಮಾಡಿ ರೂಪಾಲಿ ಎಸ್.ನಾಯ್ಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಶಾಲಾ ಕಾಲೇಜುಗಳ ಕೊಠಡಿ, ಪ್ರಯೋಗಾಲಯ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಶಾಸಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ಕಾರವಾರದ ಅಟೋನೊಮಸ್ ಕಾಲೇಜಿಗೆ ಕೊಠಡಿಗಳು, ಶಾಸಕರ ಮಾದರಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಕಟ್ಟಡಗಳು ಸೇರಿದಂತೆ ಹಲವು ಕಾಮಗಾರಿಗಳು ರೂಪಾಲಿ ನಾಯ್ಕ ಅವರ ಪ್ರಯತ್ನದಿಂದ ಮಂಜೂರಾಗಿವೆ.