ಅಮೆರಿಕ: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ್ತಿ ಅಣ್ಣು ರಾಣಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಕನಸು ನನಸಾಗಲಿಲ್ಲ. ಅಣ್ಣು ರಾಣಿ ಶುಕ್ರವಾರ ನಡೆದ ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ನಲ್ಲಿ ಏಳನೇ ಸ್ಥಾನ ಗಳಿಸುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಪ್ರಯಾಣವನ್ನು ಕೊನೆಗೊಳಿಸಿದರು.
56.18 ಮೀ ಎಸೆತದೊಂದಿಗೆ ಶುಭಾರಂಭ ಮಾಡಿದ ಅಣ್ಣು, ಎರಡನೇ ಪ್ರಯತ್ನದಲ್ಲಿ 61.12 ಮೀ ಎಸೆದರು. ಆದರೆ ಉಳಿದ ಪ್ರಯತ್ನಗಳಲ್ಲಿ 60 ಮೀ ಮಾರ್ಕ್ ದಾಟಲು ವಿಫಲರಾದರು. ಕ್ವಾಲಿಫೈಯರ್‌ನಲ್ಲಿ 59.60 ಮೀ ಅತ್ಯುತ್ತಮ ಎಸೆತದೊಂದಿಗೆ ಎಂಟನೇ ಸ್ಥಾನಗಳಿಸಿದ್ದ ಅವರು, 12 ಸ್ಪರ್ಧಿಗಳೊಂದಿಗೆ ಫೈನಲ್ ಪ್ರವೇಶಿಸಿದ್ದರು. ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ಎರಡನೇ ಫೈನಲ್ ಆಗಿತ್ತು.
ಈಗ 63.82 ಮೀ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಅಣ್ಣು, ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಂದು ಪ್ರಾರಂಭವಾಗುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.