ಕಾರವಾರ: ಗಣಿ ಮತ್ತು ಕಲ್ಲುಪುಡಿ ಮಾಡುವ ಘಟಕಗಳಿಗೆ ಲೈಸನ್ಸ್ ನೀಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಒಂದು ವೇಳೆ ಗಣಿಗಾರಿಕೆಯಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುವಂತಿದ್ದರೆ ಅಂತಹ ಅರ್ಜಿಗಳಿಗೆ ಅನುಮೋದನೆ ನೀಡಬಾರದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಮತ್ತು ಜಲ್ಲಿಕಲ್ಲು ಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡುವ ಹಾಗೂ ನಿಯಂತ್ರಣ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು ಪಟ್ಟಾ ಜಮೀನಿನಲ್ಲಿ ಹೊಸದಾಗಿ ಕಲ್ಲುಗಣಿ ಲೈಸನ್ಸ್ ಮಂಜೂರಾತಿಗೆ ಒಟ್ಟು 16 ಅರ್ಜಿ ಸಲ್ಲಿಸಲಾಗಿದ್ದು, ಸರ್ಕಾರದ ನಿಯಮಗಳಿಗನುಸಾರವಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಇನ್ನು ಗಣಿಗಾರಿಕೆ ಸ್ಥಾಪಿಸಲು ಸರ್ಕಾರದ ನಿಯಮಗಳ ಪ್ರಕಾರ ಜಮೀನಿನಿಂದ ಯಾವುದೇ ಸಾರ್ವಜನಿಕ ಕಟ್ಟಡಗಳು, ರಸ್ತೆ ಕಾಲುವೆ ಮತ್ತು ರೈಲ್ವೆ ಹಳಿಗಳು, ಅರಣ್ಯಪ್ರದೇಶ, ವನ್ಯಜೀವಿ ಪ್ರದೇಶದಿಂದ ದೂರದಲ್ಲಿರುವಂತಹ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ಸ್ಥಾಪಿಸಲು ಅನುಮತಿ ನೀಡಬೇಕು ಎಂದರು.
ತಾತ್ಕಾಲಿಕ ಕ್ರಷರ್ ಘಟಕದ ಅವಧಿ ವಿಸ್ತರಣೆಯೂ ಈಗಾಗಲೇ ಮುಕ್ತಾಯಗೊಡಿದ್ದು, ಅವಧಿ ಮುಗಿದ ನಂತರ ನಿಯಮ ಬಾಹಿರವಾಗಿ ಕ್ರಷರ್ ನಡೆಸುತ್ತಿದ್ದರೆ ಅಂತಹ ಘಟಕವನ್ನು ಸ್ಥಗಿತಗೊಳಿಸಿ ನಿಯಮಾನುಸಾರ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ವರದಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರೀಯಾಂಗಾ ಎಂ, ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್. ಬದರಿನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಕೆ. ಸಿ. ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು ಹಾಜರಿದ್ದರು.