ಮಂಕಿಪಾಕ್ಸ್: ಹಾಟ್‌ಸ್ಪಾಟ್ ಆಯ್ತಾ ಕೇರಳ.?

ಕೇರಳ: ದೇಶದಲ್ಲಿ ಮಂಕಿಪಾಕ್ಸ್ ಭೀತಿ ಹೆಚ್ಚುತ್ತಿದ್ದು ಶುಕ್ರವಾರ ಕೇರಳದಲ್ಲಿ 3 ನೇ ಪ್ರಕರಣ ವರದಿಯಾಗಿದೆ. ಈ ಮೂಲಕ ಕೇರಳ ಮಂಕಿಪಾಕ್ಸ್ ಹಾಟ್‌ಸ್ಪಾಟ್ ಆಗುತ್ತಿದೆಯೇ.? ಎಂಬ ಆತಂಕ ಎದುರಾಗಿದೆ.

ಯುಎಇಯಿಂದ ರಾಜ್ಯಕ್ಕೆ ಆಗಮಿಸಿದ ಮಲಪ್ಪುರಂ ಮೂಲದ ಮಹಿಳೆಯಲ್ಲಿ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಇದೀಗ ಆ ಮಹಿಳೆಯಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ. ಸೋಂಕಿತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್.!

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮೊದಲ ಮತ್ತು ಕಣ್ಣೂರು ಜಿಲ್ಲೆಯಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಕಣ್ಣೂರಿನ ಯುವಕ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದರು. ಹೀಗಾಗಿ ದೇಶದ ಪ್ರತೀ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಿ ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.