ಕಾರವಾರ: ನಗರದ ರಾಕ್ ಗಾರ್ಡನ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ವಾಯುವಿಹಾರಕ್ಕೆಂದು ಬಂದವರಿಗೆ ಕಡವೆ ಕೋಡೊಂದು ಸಿಕ್ಕಿದ್ದು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹೆದ್ದಾರಿ ಪಕ್ಕ ಮಣ್ಣಿನಲ್ಲಿ ಬಟ್ಟೆ ಸುತ್ತಿರುವ ಕೊಂಬು ವಾಯುವಿಹಾರಕ್ಕೆಂದು ಬಂದವರ ಕಣ್ಣಿಗೆ ಬಿದ್ದಿದೆ. ಇದು ಯಾವುದೋ ಕಾಡು ಪ್ರಾಣಿಯ ಕೊಂಬಿರಬಹುದು ಎಂದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಕೊಂಬನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಇದು ಕಡವೆಯ ಕೊಂಬಾಗಿದ್ದು ಸುಮಾರು 3-4 ವರ್ಷಗಳ ಹಿಂದಿನದ್ದಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಕೊಂಬನ್ನು ಸೀರೆಯಲ್ಲಿ ಸುತ್ತಿ ಮಣ್ಣಿನಲ್ಲಿ ಹುಗಿದಿಡಲಾಗಿತ್ತು.!
ಸ್ಥಳದಲ್ಲಿ ಕೇವಲ ಎರಡು ಒಣಗಿದ ಕೊಂಬುಗಳು ಮಾತ್ರ ದೊರಕಿದ್ದು ಅಕ್ಕಪಕ್ಕದಲ್ಲಿ ಕಡವೆಯ ಕಳೆಬರಹ ಕಂಡುಬಂದಿಲ್ಲ. ಹೀಗಾಗಿ ಹಳೆಯದ್ದಾಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಕಳೆದ ಕೆಲ ದಿನದ ಹಿಂದೆ ಸುರಿದ ಮಳೆಯ ಅಬ್ಬರಕ್ಕೆ ಮಣ್ಣು ಕೊಚ್ಚಿಹೋಗಿ ಕೋಡಿನ ಸ್ವಲ್ಪ ಭಾಗ ಕಾಣುತ್ತಿತ್ತು. 3-4 ವರ್ಷಗಳ ಹಿಂದೆ ಯಾರಾದರೂ ದುಷ್ಕರ್ಮಿಗಳು ಕಡವೆಯನ್ನು ಕೊಂದು ತಲೆಯ ಭಾಗವನ್ನು ಇಲ್ಲಿ ಹೂತಿಟ್ಟಿರಬಹುದಾದ ಸಾಧ್ಯತೆ ಇದ್ದು ಈ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.