ದಾಂಡೇಲಿ: ಕಳೆದ ಒಂದು ತಿಂಗಳ ಹಿಂದೆಯಷ್ಟೇ ಡಾಂಬರಿಕರಣಗೊಂಡಿದ್ದ ನಗರದ ಜೆ ಎನ್ ರಸ್ತೆ ಈಗ ಪುನಃ ಹದಗೆಟ್ಟಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆ ಕಂಪನಿ ವಿರುದ್ಧ ಹಲವು ಸಂಘಟನೆಗಳು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಎಲ್ಲಾ ವಾರ್ಡ್ ಗಳ ರಸ್ತೆಗಳು ಯು ಜಿ ಡಿ ಕಾಮಗಾರಿಯಿಂದ ಸಂಪೂರ್ಣ ಹದಗೆಟ್ಟಿವೆ. ಹಾಳಾಗಿರುವ ಪ್ರಮುಖ ರಸ್ತೆಯನ್ನು ಸರಿಪಡಿಸುವಂತೆ ಸುಪ್ರದಾ ಗುತ್ತಿಗೆ ಕಂಪನಿಗೆ ನಗರಸಭೆ ಆದೇಶಿಸಿತ್ತು. ಆದೇಶದಂತೆ ನಗರದ ಜೆ ಎನ್ ರಸ್ತೆಯನ್ನು ಸುಪ್ರದಾ ಕಂಪನಿ ಮರುಡಾಂಬರಿಕರಣ ಮಾಡಿತ್ತು. ಆದರೆ ಕಾಮಗಾರಿ ನಡೆದ 15 ದಿನದೊಳಗೆ ಹಾಕಿರುವ ಡಾಂಬರ್ ಹಾಗೂ ಜಲ್ಲಿ ಕಿತ್ತು ಹೋಗಿದೆ. ಇದರಿಂದ ವಾಹನ ಸವಾರರು ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನು ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆ ಕಂಪನಿ ವಿರುದ್ಧ ತಹಶೀಲ್ದಾರ್ ಸೂಕ್ತ ಕ್ರಮ ಜರುಗಿಸಿಬೇಕೆಂದು ಕರವೇ (ಪ್ರವೀಣ ಶೆಟ್ಟಿ ಬಣ) ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ ಕೊಠಾರಿ ದಾಂಡೇಲಿ ತಾಲೂಕಾಧ್ಯಕ್ಷ ಮಂಜು ಪಂತೋಜಿ ಸೇರಿದಂತೆ ಹಲವರಿದ್ದರು.