ಐ.ಎನ್.ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ.!

ಕಾರವಾರ: ಕದಂಬ ನೌಕಾನೆಲೆ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಕರ್ತವ್ಯದಲ್ಲಿದ್ದ ಯುದ್ಧವಿಮಾನ ವಾಹಕ ನೌಕೆ ಐ.ಎನ್.ಎಸ್ ವಿಕ್ರಮಾದಿತ್ಯದಲ್ಲಿ ಬುಧವಾರ ರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ಯಾವುದೇ ಜೀವಹಾನಿ ಉಂಟಾಗಿಲ್ಲ.

ಐ.ಎನ್.ಎಸ್. ವಿಕ್ರಮಾದಿತ್ಯದ ದುರಸ್ತಿ ಕಾರ್ಯದ ನಿಮಿತ್ತ ಕೆಲವು ತಿಂಗಳುಗಳಿಂದ ನೌಕೆಯು ಕದಂಬ ನೌಕಾನೆಲೆಯಲ್ಲಿಯೇ ಇತ್ತು. ಇದೀಗ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಬುಧವಾರ ಸಮುದ್ರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳನ್ನು ನಡೆಸುವ ವೇಳೆ ಇದ್ದಕ್ಕಿದ್ದಂತೆ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ನೌಕಾ ಸಿಬ್ಬಂದಿ ಯುದ್ಧ ನೌಕೆಯಲ್ಲಿನ ಅಗ್ನಿಶಾಮಕ ವ್ಯವಸ್ಥೆಯ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಕ್ರಮಾದಿತ್ಯ ಇನ್ನೂ ಅರಬ್ಬೀ ಸಮುದ್ರದಲ್ಲಿದ್ದು ಇಂದು ಕಾರವಾರದ ಕದಂಬ ನೌಕಾನೆಲೆಗೆ ತರಲಾಗುತ್ತದೆ. ಅಗ್ನಿ ಅವಘಡದಿಂದಾದ ಹಾನಿಯ ಪ್ರಮಾಣ ತಿಳಿದುಬಂದಿಲ್ಲ.

ಈ ಹಿಂದೆ 2019 ರಲ್ಲಿ ಕೂಡ ಇಂಥದ್ದೇ ಘಟನೆ ನಡೆದು ಓರ್ವ ನೌಕಾ ಅಧಿಕಾರಿ ಮೃತಪಟ್ಟಿದ್ದರು. 2021ರಲ್ಲೂ ಅಗ್ನಿ ಅವಘಡ ಮರುಕಳಿಸಿತ್ತಾದರೂ ಯಾವುದೇ ಸಾವು ನೋವು ಉಂಟಾಗಿರಲಿಲ್ಲ. ಇದೀಗ ಮತ್ತೊಮ್ಮೆ ಈ ಅವಘಡ ನಡೆದಿದೆ.

ಇನ್ನು ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ನೌಕಾಪಡೆ ಆದೇಶಿಸಿದೆ.