ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿದ್ದು, ಬೇಡ್ತಿ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದೆ. ನೀರು ಕಡಿಮೆಯಾಗಿರುವುದರಿಂದ ಗುಳ್ಳಾಪುರ ಸಮೀಪದ ಫಣಸಗುಳಿ ಬಳಿ ನದಿಯಲ್ಲಿ ಮುಳುಗಿದ್ದ ತಾತ್ಕಾಲಿಕ ಸೇತುವೆಯ ಮೇಲೆ ಮತ್ತೆ ಓಡಾಟ ಆರಂಭವಾಗಿದೆ. ಆದರೆ ಸೇತುವೆ ಮುಳುಗಿದಾಗ ನದಿಯಲ್ಲಿ ಮಣ್ಣು, ಕಸ, ತ್ಯಾಜ್ಯಗಳು ಕೊಚ್ಚಿಕೊಂಡು ಸೇತುವೆಯ ಮೇಲೆ ಬಂದು ರಾಶಿ ಬಿದ್ದಿದೆ. ಇದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.
ಸ್ಥಳೀಯರು ಸೇತುವೆ ಮೇಲಿನ ಕಸ, ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ, ಓಡಾಟಕ್ಕೆ ಸೇತುವೆಯನ್ನು ಸಿದ್ಧಗೊಳಿಸುವಲ್ಲಿ ಶ್ರಮಿಸಿದರು. ಸೇತುವೆಯ ಅಕ್ಕಪಕ್ಕ ತುಂಬಿ ನಿಂತ ಮಣ್ಣನ್ನು ಜೆಸಿಬಿ ಸಹಾಯದಿಂದ ತೆಗೆದು, ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಲಾಯಿತು. ಇದರಿಂದ ಸೇತುವೆ ಮುಳುಗಿ ಜನರ ಓಡಾಟಕ್ಕೆ ಉಂಟಾಗಿದ್ದ ಸಮಸ್ಯೆ ಸದ್ಯದ ಮಟ್ಟಿಗೆ ದೂರವಾದಂತಾಗಿದೆ.