ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಿಎಂ ಭರವಸೆ.! ಜಿಲ್ಲೆಗೇ ಬಂದು ಘೋಷಣೆ ಮಾಡಲಿದ್ದಾರೆ ಬೊಮ್ಮಾಯಿ.! ಶಾಸಕಿ ರೂಪಾಲಿ ನಾಯ್ಕ್ ಹೇಳಿಕೆ

ಕಾರವಾರ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದು, ಅವರು ಆಸ್ಪತ್ರೆ ನಿರ್ಮಾಣದ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಕಾರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಅಂಬುಲೆನ್ಸ್ ಅಪಘಾತ ಘಟನೆಯಿಂದ ಮನಸ್ಸಿಗೆ ಬಹಳ ನೋವಾಗಿದೆ. ನಾನು ಶಾಸಕಿಯಾದಾಗಿನಿಂದ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಹಲವಾರು ಬಾರಿ ಮನವಿಯನ್ನು ನೀಡಿದ್ದೇನೆ. ಈಗ ಅವಕಾಶ ಕೂಡಿ ಬಂದಿದ್ದು, ಸಂಬಂಧಿಸಿದ ಕಡತ ಹಣಕಾಸು ಇಲಾಖೆಯಲ್ಲಿದೆ. ಬಹು ದಿನದ ಬೇಡಿಕೆ ಶೀಘ್ರದಲ್ಲಿ ಈಡೇರಲಿದೆ.

ಇತ್ತೀಚೆಗೆ ಸಂಭವಿಸಿದ ನೆರೆ ಅನಾಹುತ ವೀಕ್ಷಿಸಲು ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉಡುಪಿಯಲ್ಲಿ ಭೇಟಿಯಾಗಿ ವಿನಂತಿಸಿದಾಗ ಅಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಗೆ ಬರವುದಾಗಿ ಹೇಳಿದ್ದಾರೆ. ಅಲ್ಲದೇ, ಅಂದು ಅವರು ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡುವ ಸಾಧ್ಯತೆ ಇದೆ. ಜಿಲ್ಲೆ ಎಲ್ಲಾ ಶಾಸಕರ, ಸಂಸದರ ನಿರೀಕ್ಷೆಯೂ ಅದೇ ಆಗಲಿದೆ ಎಂದರು.

ಕಾರವಾರದಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆ ಕಟ್ಟಡದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣವಾಲಿದೆ. ಅಲ್ಲದೆ, ಹಟ್ಟಿಕೇರಿಯಲ್ಲಿ ಕೇಂದ್ರದ ಅನುದಾನದಿಂದ ಕ್ರಿಟಿಕಲ್ ಕೇರ್ ಸೆಂಟರ್ ಕೂಡ ನಿರ್ಮಾಣ ವಾಗಲಿದೆ ಎಂದು ರೂಪಾಲಿ ನಾಯ್ಕ ಹೇಳಿದರು.