ಹೊನ್ನಾವರ: ಉತ್ತಮ ಗುರುವಿನ ಮಾರ್ಗದರ್ಶನ ಶಿಷ್ಯನಿಗೆ ದೊರೆತರೆ ಆತ ಜೀವನದಲ್ಲಿ ಯಶಸ್ಸು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ರಾಜೀವ ವಿ. ನಾಯಕ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಅರೇಅಂಗಡಿಯ ಶ್ರೀ ಕರಿಕಾನ ಪರಮೇಶ್ವರಿ ಪ. ಪೂ ಕಾಲೇಜು ಆವರಣದಲ್ಲಿ ಸುಮನಾ ಟ್ರಸ್ಟ್ ವತಿಯಿಂದ ಸೋಮವಾರ ನಡೆದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿಯವರ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಿಸಿದ ಗುರುಗಳನ್ನು ಸ್ಮರಿಸುವ ಕಾರ್ಯ ಅನುಕರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತ್ರಿ ಪುರಸ್ಕೃತ ಸಂಸ್ಥೆಯ ಆಡಳಿತಾಧಿಕಾರಿ ಎಸ್. ಜೆ ಕೈರನ್ ಮಾತನಾಡಿ, ಐದು ತಲೆಮಾರು ಉಪಸ್ಥಿತಿ ಇರುವ ಗುರುವಂದನಾ ಕಾರ್ಯಕ್ರಮ ಅಭೂತಪೂರ್ವವಾದದ್ದು. ಕಲಿತ ಶಾಲೆ, ಕಲಿಸಿದ ಗುರುಗಳಿಗೆ ಗೌರವಿಸುವ ಗುಣ ಎಲ್ಲರು ರೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಿಕ್ಷಣ ವೃತ್ತಿ ಮೂಲಕ ವಿದ್ಯಾರ್ಜನೆ ಮಾಡಿದ ಡಾ.ಎನ್.ಆರ್.ನಾಯಕ, ಹನುಮಂತ ಭಟ್, ವಿ.ಎಸ್.ಹೆಗಡೆ, ಎನ್.ಎಲ್.ಹೆಗಡೆ, ಕೆ.ಎಸ್.ಹೆಗಡೆ, ಎಸ್.ಜಿ.ಹೆಗಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ವೈದ್ಯ ಶಿವಾನಂದ ಹೆಗಡೆ, ಪ್ರಾಚಾರ್ಯ ವಿ.ಎನ್ ಭಟ್, ಪ್ರಕಾಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.