ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಾಂಘಿಕ ಹೋರಾಟ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ತಾಲೂಕಿನ ಗುಣವಂತೆಯ ಕೆರೆಮನೆ ಶಿವರಾಂ ಹೆಗಡೆ ಸಭಾಭವನದಲ್ಲಿ ಮಂಗಳವಾರ ನಡೆದ ‘ಜನಸೇವೆಗಾಗಿ ನಾವು ನೀವು’ ಕಾರ್ಯಕ್ರಮದಲ್ಲಿ ವಿವಿಧ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರಾವಳಿಯ ವಿಶೇಷತೆಯನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯು ಶೇ 70 ರಷ್ಟು ಅರಣ್ಯಪ್ರದೇಶಗಳಿಂದ ಕೂಡಿದ್ದು ಈ ವರ್ಷ ಭಾರಿ ಮಳೆಯಿಂದಾಗಿ ಹಲವು ಭಾಗಗಳಲ್ಲಿ ನೆರೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಕಾಲದಲ್ಲಿ ಜನತೆಯ ಕಷ್ಟಗಳಿಗೆ ಸ್ಪಂದಿಸಿ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ನರೇಗಾ, ವಸತಿ, ಗ್ರಂಥಾಲಯ, ಎಸ್ ಬಿ ಎಮ್ ಯೋಜನೆಯ ಪ್ರಗತಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ ಸೇರಿದಂತೆ ಅನೇಕರಿದ್ದರು.